ಮಂಗಳೂರು:ನಕಲಿ ಷೇರು ಮಾರುಕಟ್ಟೆ ವಾಣಿಜ್ಯ ಅಪ್ಲಿಕೇಶನ್‌ಗಳ ಮೂಲಕ ಹೂಡಿಕೆದಾರರನ್ನು ಮೋಸಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮಂಗಳೂರಿನ ಹೂಡಿಕೆದಾರನೊಬ್ಬ ₹13,09,245 ಮೊತ್ತವನ್ನು ಕಳೆದುಕೊಂಡ ಪ್ರಕರಣ ವರದಿಯಾಗಿದೆ.
ದೂರಿನ ಪ್ರಕಾರ, ಎಸ್ಎಂಸಿ ಗ್ಲೋಬಲ್ ಸೆಕ್ಯೂರಿಟೀಸ್ ಟ್ರೇಡಿಂಗ್ (SMC Global Securities Trading App) ಎಂಬ ನಕಲಿ ಮೊಬೈಲ್ ಅಪ್ಲಿಕೇಶನ್ ಮುಖಾಂತರ ವಂಚಿಸಲಾಗಿದೆ. ವಂಚನೆಗೊಳಗಾದ ಹೂಡಿಕೆದಾರರು IPO ಸ್ಟಾಕ್ ಖರೀದಿ ಮಾಡುವಾಗ ದೊಡ್ಡ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ದೂರಿನ ಮೇರೆಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಇರುವುದೇನು?:2024ರ ಡಿ.14ರಂದು, ದೂರುದಾರರು VIP3 ಗ್ಲೋಬಲ್ ಸೆಕ್ಯೂರಿಟೀಸ್ ಆಫಿಸಿಯಲ್ ಸ್ಟಾಕ್ ಕಮ್ಯೂನಿಟಿ ಎಂಬ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಲು ಆಹ್ವಾನಿಸಲ್ಪಟ್ಟಿದ್ದರು. ಈ ಗ್ರೂಪ್ನಲ್ಲಿ ಎಸ್ಎಂಸಿ ಗ್ರೂಪ್ನ ಡೈರೆಕ್ಟರ್ ಮತ್ತು ಸಿಇಒ ಅಜಯ್ ಗರ್ಗ್ ಎಂಬವರನ್ನು ಪರಿಚಯಿಸಿದ ಸಂದೇಶವಿತ್ತು. ವಂಚಕರು ಎಸ್ಎಂಸಿ ಗ್ರೂಪ್ನ ಡೈರೆಕ್ಟರ್ ಮತ್ತು ಸಿಇಒ ಬಗ್ಗೆ ಸುಳ್ಳು ಮಾಹಿತಿ ನೀಡಿ, ಎಸ್ಎಂಸಿ ಗ್ಲೋಬಲ್ ಸೆಕ್ಯೂರಿಟೀಸ್ ಆ್ಯಪ್ ಮೂಲಕ IPO ಸ್ಟಾಕ್‌ಗಳಿಗೆ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ.
ಈ ಕುರಿತು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸಂದೇಶ ರವಾನಿಸಿದ ತಕ್ಷಣ, +918122010756 ಎಂಬ ಸಂಖ್ಯೆಯಿಂದ ಸಂಪರ್ಕಿಸಿದ ವ್ಯಕ್ತಿಯೊಬ್ಬ ತಾನು ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟೀಸ್‌ನಲ್ಲಿ ಅಂತಾರಾಷ್ಟ್ರೀಯ ಗ್ರಾಹಕ ಸೇವಾ ಪ್ರತಿನಿಧಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಕೆಲವು ದಿನಗಳ ನಂತರ, ಈ ವ್ಯಕ್ತಿ ತನ್ನ ಹೆಸರನ್ನು ವಂಧನಾ ಭಾರ್ತಿ ಎಂದು ಬದಲಾಯಿಸಿಕೊಂಡು, ಇನ್ಸ್ಟಿಟ್ಯೂಷನಲ್ ಬ್ರೋಕರೇಜ್ ಮತ್ತು IPO ಸ್ಟಾಕ್ ಹಂಚಿಕೆ ಸಂಬಂಧಿಸಿದಂತೆ ಆಕರ್ಷಕವಾಗಿ ವಿವರಿಸಿದ್ದಾನೆ. ಬಳಿಕ ವಂಚಕರು ಲಿಂಕ್ವೊಂದರ ಮೂಲಕ SMC STK ಎಂಬ ನಕಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ದೂರುದಾರರಿಗೆ ಸೂಚಿಸಿದ್ದಾರೆ.
ಮೊದಲ ಹೂಡಿಕೆ:ಪ್ರಾರಂಭಿಕ ಹೂಡಿಕೆಯಾಗಿ (₹15,000) ಡ್ಯಾಮ್ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್ IPO ಖರೀದಿಸಲು ಹೂಡಿಕೆದಾರರು ₹10,000 ಪಾವತಿ ಮಾಡಿದ್ದಾರೆ. ಇದರಲ್ಲಿ 5,000 ರೂ.ಗಳನ್ನು ಕಂಪನಿಯವರೇ ಪಾವತಿಸುವುದಾಗಿ ತಿಳಿಸಿದ್ದರು.