ಮಂಗಳೂರು:ಬಂದರು ನಗರಿ ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಮಾಡುವ ರಸ್ತೆಗಳಿಗೆ ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾನಿಯನ್ನುಂಟು ಮಾಡುತ್ತಿದೆ. ಪರಿಣಾಮ ಮಂಗಳೂರು ಬೆಂಗಳೂರು ನಡುವೆ ರಸ್ತೆ ಸಂಚಾರ, ರೈಲು ಸಂಚಾರಕ್ಕೆ ವಿಘ್ನಗಳು ಎದುರಾಗಿವೆ.
ಸದ್ಯ ಮಂಗಳೂರು ಬೆಂಗಳೂರು ನಡುವೆ ಸಂಪರ್ಕಿಸುವ ಪ್ರಮುಖ ರಸ್ತೆ ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವುದರಿಂದ ಸಂಚಾರ ಬಂದ್ ಆಗಿದೆ. ಮತ್ತೊಂದೆಡೆ ಸಕಲೇಶಪುರ ಭಾಗದಲ್ಲಿ ರೈಲ್ವೆ ಮಾರ್ಗದಲ್ಲಿ ಗುಡ್ಡ ಕುಸಿತವುಂಟಾಗಿರುವುದರಿಂದ ರೈಲು ಸಂಚಾರವು ಬಂದ್ ಸ್ಥಗಿತವಾಗಿದೆ.
ಮಂಗಳೂರು ಬೆಂಗಳೂರು ನಡುವೆ ಸಂಚಾರಕ್ಕೆ ಮೂರು ರೀತಿಯ ವ್ಯವಸ್ಥೆಗಳಿವೆ. ರಸ್ತೆ, ರೈಲು ಸಾರಿಗೆ, ವಿಮಾನ ಸಂಚಾರದ ಮೂಲಕ ಮಂಗಳೂರು ಬೆಂಗಳೂರು ನಡುವೆ ಸಂಪರ್ಕ ಬೆಸೆಯಬಹುದು. ಇದರಲ್ಲಿ ಬಹುತೇಕ ಜನರು ಬಳಸುವುದು ರಸ್ತೆ ಸಾರಿಗೆಯನ್ನು. ಈ ಎರಡು ನಗರಗಳನ್ನು ಪ್ರಮುಖ ಮೂರು ರಸ್ತೆಗಳು ಸಂಪರ್ಕಿಸುತ್ತದೆ. ಇದರಲ್ಲಿ ಪ್ರಮುಖ ರಸ್ತೆ ಉಪ್ಪಿನಂಗಡಿಯಿಂದ ಹಾಸನ ಸಂಪರ್ಕಿಸುವ ಶಿರಾಡಿ ಘಾಟ್ ಮೂಲಕ ಪ್ರಯಾಣ ಬೆಳೆಸುವ ಹೆದ್ದಾರಿ. ಇನ್ನೊಂದು ಬೆಳ್ತಂಗಡಿಯ ಉಜಿರೆಯಿಂದ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿ ಹೆದ್ದಾರಿ. ಮೂರನೇಯದು ಸುಳ್ಯದಿಂದ ಮಡಿಕೇರಿ ಸಂಪರ್ಕಿಸುವ ಸಂಪಾಜೆ ಘಾಟಿ ಹೆದ್ದಾರಿ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವವರು ತಮಗೆ ಅನುಕೂಲವಾಗುವ ಮೂರು ಘಾಟಿಗಳಲ್ಲಿ ಯಾವುದಾದರೂ ಒಂದು ಘಾಟಿ ಮೂಲಕ ತೆರಳಿ ಮಂಗಳೂರು ಬೆಂಗಳೂರು ಸಂಪರ್ಕ ಬೆಳೆಸುತ್ತಾರೆ. ಇದರಲ್ಲಿ ಹೆಚ್ಚಿನವರ ಆಯ್ಕೆ ಶಿರಾಡಿ ಘಾಟ್ ಸಂಚರಿಸುತ್ತಾರೆ.
ಇದನ್ನೂ ಓದಿ: ಜೋಗ ಜಲಪಾತದ ರಾಜ, ರಾಣಿ, ರೋರರ್, ರಾಕೆಟ್ ಹೆಸರು ಹೇಗೆ ಬಂತು ನಿಮಗೆ ಗೂತ್ತಾ! - Jog Waterfalls
ದಕ್ಷಿಣ ಕನ್ನಡ ಜಿಲ್ಲೆ ಪಶ್ಚಿಮ ಘಟ್ಟ ತಪ್ಪಲಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸಂಪರ್ಕಿಸಬೇಕಾದರೆ ಪಶ್ಚಿಮ ಘಟ್ಟವನ್ನು ದಾಟಿಕೊಂಡೆ ಹೋಗಬೇಕು. ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ಅನಾಹುತಗಳು ಸಾಮಾನ್ಯ. ಪಶ್ಚಿಮ ಘಟ್ಟದಲ್ಲಿ ಹಾದು ಹೋಗುವ ರಸ್ತೆಗಳ ಮೇಲೆ ಮಳೆಗಾಲದಲ್ಲಿ ಗುಡ್ಡ ಕುಸಿದು ಆಗಾಗ ಅವಾಂತರ ಸೃಷ್ಟಿಯಾಗುತ್ತದೆ. ಈ ಬಾರಿಯು ಶಿರಾಡಿ ಘಾಟ್ ರಸ್ತೆಯಲ್ಲಿ ಹಲವೆಡೆ ಗುಡ್ಡ ಕುಸಿತಗಳಾಗಿ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಶಿರಾಡಿ ಘಾಟ್ನಲ್ಲಿ ಸಂಚಾರಕ್ಕೆ ತೊಂದರೆಯಾದಾಗ ಸವಾರರು ಚಾರ್ಮಾಡಿ ಘಾಟ್ ಅಥವಾ ಸಂಪಾಜೆ ಘಾಟ್ ಬಳಸುತ್ತಾರೆ. ಆದರೆ ಈ ಚಾರ್ಮಾಡಿ ರಸ್ತೆ ಶಿರಾಡಿ ಘಾಟ್ನಷ್ಟು ಉತ್ತಮವಾಗಿಲ್ಲ. ಅಗಲ ಕಿರಿದಾಗಿರುವ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಲೇ ಇರುತ್ತದೆ. ಮಂಗಳೂರು ಬೆಂಗಳೂರು ಸಂಪರ್ಕಕ್ಕೆ ದೂರ ದಾರಿಯಾಗಿರುವ ಸಂಪಾಜೆ ಘಾಟ್ನಲ್ಲಿ ಪ್ರಯಾಣ ಬೆಳೆಸಲು ಕೊನೆಯ ಆಯ್ಕೆಯನ್ನು ನೋಡುತ್ತಾರೆ. ಈ ಬಾರಿ ಶಿರಾಡಿ ಘಾಟ್ನಲ್ಲಿ ಹಲವು ಬಾರಿ ಗುಡ್ಡ ಕುಸಿತ ಆಗಿರುವುದರಿಂದ ಚಾರ್ಮಾಡಿ ಘಾಟ್ ಮತ್ತು ಸಂಪಾಜೆ ಘಾಟ್ ಮೂಲಕ ಸಂಚರಿಸಲಾಗುತ್ತಿದೆ.