ಮಂಗಳೂರು(ದಕ್ಷಿಣ ಕನ್ನಡ): ಸಕಲೇಶಪುರದಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಮಾರ್ಗವನ್ನು ದುರಸ್ಥಿಗೊಳಿಸಿದ ನಂತರ ಮಂಗಳೂರು-ಬೆಂಗಳೂರು ರೈಲು ಸಂಚಾರ ಇಂದಿನಿಂದ ಪುನರಾರಂಭಗೊಂಡಿತು.
ರೈಲು ಸಂಖ್ಯೆ 16575, ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಸುರಕ್ಷಿತವಾಗಿ ಈ ರೈಲ್ವೆ ಮಾರ್ಗದಲ್ಲಿ ಹಾದುಹೋಗುವ ಮೂಲಕ, ಬೆಂಗಳೂರು-ಮಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಸೇವೆ ಮತ್ತೆ ಶುರುವಾಗಿದೆ.
ಬೆಂಗಳೂರು ಮತ್ತು ವಿಜಯಪುರದಿಂದ ರಾತ್ರಿಯ ರೈಲುಗಳು ಬುಧವಾರ ರಾತ್ರಿಯಿಂದಲೇ ಪ್ರಾರಂಭವಾಗಲಿದ್ದು, ಕಾರವಾರ ಮತ್ತು ಮಂಗಳೂರು ಜಂಕ್ಷನ್‌ನಿಂದ ಸೇವೆಗಳು ಆಗಸ್ಟ್ 9 ಶುಕ್ರವಾರ ಪ್ರಾರಂಭವಾಗಲಿವೆ ಎಂದು ಸೌತ್ ವೆಸ್ಟರ್ನ್ ರೈಲ್ವೆ ಪ್ರಕಟಣೆ ತಿಳಿಸಿದೆ. ಯಡಕುಮಾರಿ ಮತ್ತು ಕಡಗರವಳ್ಳಿ ನಡುವಿನ ಎಲ್ಲಾ ರೈಲುಗಳು ಮುಂದಿನ ಆದೇಶದವರೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಎಂದು ತಿಳಿಸಲಾಗಿದೆ.
ಜುಲೈ 26ರ ಸಂಜೆ ಧಾರಾಕಾರ ಮಳೆಯಿಂದಾಗಿ ಸೇತುವೆಯೊಂದರ ಬಳಿ ಭೂಕುಸಿತವಾಗಿತ್ತು. ತಕ್ಷಣವೇ, ಎಸ್‌ಡಬ್ಲ್ಯೂಆರ್‌ನ ಮೈಸೂರು ವಿಭಾಗ ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ಪ್ರಾರಂಭಿಸಿತು. ಈ ದುರಸ್ಥಿ ಕಾರ್ಯವನ್ನು ಪೂರ್ಣಗೊಳಿಸಲು ರೈಲ್ವೆಗೆ ಸುಮಾರು 10 ದಿನಗಳು ಬೇಕಾದವು.
ಆಗಸ್ಟ್ 4ರಂದು ಬೆಳಿಗ್ಗೆ 8.58ಕ್ಕೆ ರೈಲ್ವೆ ಹಳಿಯನ್ನು 'ಫಿಟ್' ಎಂದು ಪ್ರಮಾಣೀಕರಿಸಲಾಯಿತು. ಆರಂಭದಲ್ಲಿ ಗೂಡ್ಸ್ ಟ್ರೈನ್ನ್ನು ಓಡಿಸಿ ಸುರಕ್ಷತೆಯನ್ನು ಪರೀಕ್ಷಿಸಲಾಯಿತು.
ಆಗಸ್ಟ್ 8ರಂದು ಮೊದಲ ಪ್ಯಾಸೆಂಜರ್ ರೈಲು ಗೋಮ್ಮಟೇಶ್ವರ ಎಕ್ಸ್‌ಪ್ರೆಸ್ ಮಧ್ಯಾಹ್ನ 12.37ಕ್ಕೆ ಯಶಸ್ವಿಯಾಗಿ ಹಾದುಹೋಯಿತು. ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಹೆಚ್ಚುವರಿ ಜಿಎಂ ಕೆ.ಎಸ್.ಜೈನ್ ಮತ್ತು ಇತರ ಹಿರಿಯ ಅಧಿಕಾರಿಗಳು ಮೈಸೂರು ವಿಭಾಗದ ತಂಡ ಮತ್ತು ವಲಯ ಪ್ರಧಾನ ಕಚೇರಿಯ ಇತರ ಅಧಿಕಾರಿಗಳು ಟ್ರ್ಯಾಕ್ ಮರುಸ್ಥಾಪಿಸುವಲ್ಲಿ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ:ಮಂಗಳೂರು–ಹಾಸನ ಮಾರ್ಗದಲ್ಲಿ ಗುಡ್ಡ ಕುಸಿತ: 12 ರೈಲುಗಳ ಸೇವೆ ರದ್ದು - Train Cancel