ಬೆಂಗಳೂರು:'ಕರ್ನಾಟಕ ಸುವರ್ಣ ಸಂಭ್ರಮ 50' ಅಂಗವಾಗಿಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ- ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆಯಲ್ಲಿ ದಾವಣಗೆರೆಯ ಯೋಗೇಶ್ 13 ಮುದ್ದೆಗಳನ್ನು ತಿಂದು ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು. ಮೊದಲ ಸ್ಥಾನ ಪಡೆದ ಯೋಗೇಶ್ ಅವರಿಗೆ ಟಗರು ಬಹುಮಾನವಾಗಿ ನೀಡಲಾಯಿತು. ಮಹಿಳೆಯರ ವಿಭಾಗದಲ್ಲಿ 9 ಮುದ್ದೆ ತಿಂದ ವೈಟ್ಫೀಲ್ಡ್ನ ಸೌಮ್ಯ ಮೊದಲ ಸ್ಥಾನಗಳಿಸಿ ಟಿವಿಯನ್ನು ಬಹುಮಾನವಾಗಿ ಪಡೆದರು.
12 ಮುದ್ದೆ ನುಂಗಿ ದ್ವಿತೀಯ ಸ್ಥಾನ ಪಡೆದ ಮಾಲೂರಿನ ಸಂಪಗೆರೆ ಶ್ರೀನಿವಾಸ್ ಅವರು ಕುರಿ ಹಾಗೂ ಮಹಿಳಾ ವಿಭಾಗದಲ್ಲಿ 8 ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದ ಚಂದ್ರಕಲಾ ಸಿ.ಜಿ ಅವರು ಮಿಕ್ಸರ್ ಗ್ರೈಂಡರ್ ಅನ್ನು ಬಹುಮಾನವಾಗಿ ಪಡೆದರು. ಮಂಡ್ಯ, ಕುಣಿಗಲ್, ಹಾಸನ, ದಾವಣಗೆರೆ ಹೊಸಕೋಟೆ, ಮಾಲೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮುದ್ದೆ 250 ಗ್ರಾಂ ತೂಕ ಹೊಂದಿದ್ದು, ಸ್ಪರ್ಧೆಗೆ 45 ನಿಮಿಷಗಳ ಕಾಲ ಮಿತಿ ನಿಗದಿಪಡಿಸಲಾಗಿತ್ತು.