ದಾವಣಗೆರೆ: ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಹೈಪ್ರೋಫೈಲ್ ಕ್ರಿಯೇಟ್ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯುವತಿಯರು ಹುಷಾರಾಗಿರಬೇಕಾಗಿದೆ. ಹೀಗೆ ಯುವತಿಯರಿಗೆ ವಂಚಿಸುತ್ತಿದ್ದ ಖತರ್ನಾಕ್ ಕಿಲಾಡಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಮಧು ಬಂಧಿತ ಆರೋಪಿ.
ಹೈಪ್ರೋಫೈಲ್ ಕ್ರಿಯೇಟ್ ಮಾಡಿ ವಂಚನೆ:ಆರೋಪಿ ಮಧು ಮೊದಲು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಹೈಪ್ರೋಫೈಲ್ ಕ್ರಿಯೇಟ್ ಮಾಡಿ, ಅದರಲ್ಲಿನ ಯುವತಿಯರನ್ನು ಸಂಪರ್ಕಿಸಿ ಪರಿಚಯವಾಗುತ್ತಿದ್ದ. ಬಳಿಕ ಅವರಿಗೆ ಹತ್ತಿರವಾಗಿ ನಾನು ಎಂಜಿನಿಯರ್, ಶ್ರೀಮಂತ ಮತ್ತು ಸರ್ಕಾರಿ ನೌಕರ ಅಂತೆಲ್ಲಾ ಸುಳ್ಳು ಹೇಳುತ್ತಿದ್ದ. ಜೊತೆಗೆ ಮದುವೆ ಆಗುವುದಾಗಿ ಮತ್ತು ನಿಮಗೆ ಸರ್ಕಾರಿ ನೌಕರಿಯನ್ನು ಕೊಡಿಸುವುದಾಗಿ ಯುವತಿಯರನ್ನು ನಂಬಿಸಿ, ನಂತರ ಯವತಿಯರಿಗೆ ಹಿಂಸೆ ಕೊಡುವುದಲ್ಲದೇ ಅವರಿಂದ ಹಣವನ್ನೂ ಕೂಡ ಪಡೆದು ವಂಚಿಸುತ್ತಿದ್ದ. ಹೀಗೆ ಹಲವರಿಗೆ ಈತ ಮೋಸ ಮಾಡಿದ್ದಾನೆ ಎಂದು ದಾವಣಗೆರೆ ಪೊಲೀಸರು ಮಾಹಿತಿ ನೀಡಿದ್ದಾರೆ.
ದಾವಣಗೆರೆ ಯುವತಿಗೂ ಹಾಗೆಯೇ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯವಾಗಿ ಬಳಿಕ ತಾನು ರೈಲ್ವೆ ಇಲಾಖೆಯ ವರ್ಕಶಾಫ್ನಲ್ಲಿ ಎಂಜಿನಿಯರ್ ಎಂದು ನಂಬಿಸಿದ್ದ. ಬಳಿಕ ಯುವತಿಗೆ ಸರ್ಕಾರಿ ನೌಕರಿ ಆಸೆ ತೋರಿಸಿ 21 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ಅಷ್ಟೇ ಅಲ್ಲ ಹೀಗೆ ಹರಿಹರ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಸೇರಿ ಒಟ್ಟು 8 ಪೊಲೀಸ್ ಠಾಣೆಗಳಲ್ಲಿ ಹಲವು ಮಹಿಳೆಯರಿಗೆ 62.83 ಲಕ್ಷ ಹಣ ಮೋಸ ಮಾಡಿರುವ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.