ದೇವನಹಳ್ಳಿ : ಬೇರೊಬ್ಬರ ಪಾಸ್‌ಪೋರ್ಟ್ ಬಳಸಿಕೊಂಡು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲು ಯತ್ನಿಸಿದ ಪ್ರಯಾಣಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಯಾಣಿಕನನ್ನು ಬಂಧಿಸಲಾಗಿದೆ.
ಮಾರ್ಚ್ 12 ರಂದು ಶ್ರೇಯಸ್ ರಮಾನಂದ ಎಂಬುವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ ಅಲ್ಲಿಂದ ಬೇರೆಡೆಗೆ ಹೋಗಲು ಬಂದಿದ್ದರು. ಆ ಸಮಯದಲ್ಲಿ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಪಾಸ್‌ಪೋರ್ಟ್ ಪರಿಶೀಲಿಸಿದಾಗ ಅದರಲ್ಲಿರುವ ಭಾವಚಿತ್ರಕ್ಕೂ ಪ್ರಯಾಣಿಕನ ಮುಖಕ್ಕೂ ಹೊಲಿಕೆಯಾಗಿಲ್ಲ. ಇದರಿಂದ ಸಂಶಯಗೊಂಡ ಸಿಬ್ಬಂದಿ ಮತ್ತಷ್ಟು ಪರಿಶೀಲನೆ ಮಾಡಿದಾಗ ಆತ ಬೇರೊಬ್ಬರ ಪಾಸ್ಪೋರ್ಟ್ನಲ್ಲಿ ಪ್ರಯಾಣಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಆರೋಪಿ ರಮಾನಂದ ಉದ್ದೇಶಪೂರ್ವಕವಾಗಿಯೇ ಮತ್ತೊಬ್ಬರ ಹೆಸರಿನಲ್ಲಿರುವ ಪಾಸ್‌ಪೋರ್ಟ್ ಬಳಸಿಕೊಂಡು ಪ್ರಯಾಣ ಮಾಡಲು ಬಂದಿದ್ದ ಎಂದು ತಿಳಿದು ಬಂದಿದೆ. ಆತನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಕಲಂ 419 ಐಪಿಸಿ ಮತ್ತು ಕಲಂ 121 ಪಿಪಿ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಚಿನ್ನ ಸಾಗಿಸುತ್ತಿದ್ದವನ ಬಂಧನ:ಅಲಂಕಾರಿಕ ಅಗರಬತ್ತಿ ಕಂಟೈನರ್ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಇತ್ತೀಚೆಗೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆರೋಪಿಯಿಂದ 17 ಲಕ್ಷ ರೂ. ಮೌಲ್ಯದ 279.5 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಿಕೊಳ್ಳಲಾಗಿತ್ತು.
ಕುವೈತ್ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಸಂಖ್ಯೆ ಜೆ 9-431 ಬಂದಿಳಿದಿದ್ದು, ಇದರಲ್ಲಿನ ಒಬ್ಬ ಪ್ರಯಾಣಿಕನ ಮೇಲಿನ ಸಂಶಯದಿಂದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಆತ ಅಲಂಕಾರಿಕ ಅಗರಬತ್ತಿ ಕಂಟೈನರ್ನಲ್ಲಿ ಮರೆಮಾಚಿ ಚಿನ್ನದ ತುಂಡುಗಳನ್ನ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಅಧಿಕಾರಿಗಳು ಆರೋಪಿಯಿಂದ 17,23,117 ರೂಪಾಯಿ ಮೌಲ್ಯದ 279.5 ಗ್ರಾಂ ಚಿನ್ನ ಜಪ್ತಿ ಮಾಡಿದ್ದರು.
ಪ್ರತ್ಯೇಕ ಪ್ರಕರಣ, 2 ಕೋಟಿ ಮೌಲ್ಯದ ಚಿನ್ನ ವಶ:ಮೇಲಿನ ಪ್ರಕರಣಕ್ಕೂ ಕೆಲ ದಿನಗಳ ಮುನ್ನ, ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕರನ್ನು ತಡೆದಿದ್ದ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು 2 ಕೋಟಿ ರೂ. ಮೌಲ್ಯದ 3,311 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು. ಕೌಲಾಲಂಪುರ, ಜೆಡ್ಡಾ, ಶಾರ್ಜಾ ಮತ್ತು ಬ್ಯಾಂಕಾಕ್ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದ ಐವರು ಪುರುಷರು ಮತ್ತು 11 ಮಂದಿ ಮಹಿಳೆಯರನ್ನು ತಡೆದು ತಪಾಸಣೆ ನಡೆಸಲಾಗಿತ್ತು.
ಇದನ್ನೂ ಓದಿ:ಪ್ಯಾಂಟ್, ಬನಿಯನ್ಗೆ ಚಿನ್ನದ ಪೇಸ್ಟ್ ಅಂಟಿಸಿ ಸಾಗಣೆ: ಏರ್ಪೋರ್ಟ್ನಲ್ಲಿ ಖದೀಮನ ಮೋಸದಾಟ ಬಯಲು