ಬೆಳಗಾವಿ:ಘಟಪ್ರಭೆ ಮಡಿಲಲ್ಲಿರುವ ಅರಭಾವಿಯು ದುರಂಡೀಶ್ವರ ಮಠದಿಂದಲೇ ಪ್ರಖ್ಯಾತಿ ಪಡೆದಿದೆ. ಈ ಮಠಕ್ಕೂ ಕಿತ್ತೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ವೀರರಾಣಿ ಚನ್ನಮ್ಮನ ಪತಿ, ದೊರೆ ಮಲ್ಲಸರ್ಜ ಜೀವ ಬಿಟ್ಟಿದ್ದು ಕೂಡ ಇದೇ ಪುಣ್ಯಭೂಮಿಯಲ್ಲಿ. ಆದರೆ, ಇದಕ್ಕೆ ಸರ್ಕಾರದಿಂದ ನಿರೀಕ್ಷಿತ ಮಾನ್ಯತೆ ಸಿಕ್ಕಿಲ್ಲ. ದುರದುಂಡೀಶ್ವರ ಮಠವು ಉತ್ತರ ಕರ್ನಾಟಕದ ಸಾವಿರಾರು ಭಕ್ತರನ್ನು ಹೊಂದಿದೆ. ಅದರಲ್ಲೂ ಹಲವು ದೇಸಗತಿ ಮನೆತನಗಳು ಈ ಮಠದ ಪರಮಭಕ್ತರು. ಚನ್ನಮ್ಮ ಹಾಗೂ ಅವರ ಪತಿ ಕೂಡ ಈ ಮಠಕ್ಕೆ ನಡೆದುಕೊಳ್ಳುತ್ತಿದ್ದರು.
ಪೇಶ್ವೆಗಳು ಮಲ್ಲಸರ್ಜ ದೊರೆಯನ್ನು ಬಂಧಿಸಿ ಪುಣೆ ಕಾರಾಗೃಹದಲ್ಲಿಟ್ಟಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ನಾನು ದುರದುಂಡೀಶ್ವರ ಮಠದ ಸನ್ನಿಧಾನದಲ್ಲಿ ಜೀವ ಬಿಡಬೇಕು ಎಂದು ಕೇಳಿಕೊಂಡಾಗ ಪೇಶ್ವೆಗಳು ಅವರನ್ನು ಮಠಕ್ಕೆ ಕರೆತಂದು ಬಿಟ್ಟಿದ್ದರು. ದುರದುಂಡೀಶ್ವರರು ಮಲ್ಲಸರ್ಜ ಅವರ ಬಾಯಿಗೆ ಅಂಬಲಿ, ನೀರು ಹಾಕಿದ ನಂತರ ಜೀವ ಬಿಟ್ಟರು ಎಂದು ಇತಿಹಾಸ ಹೇಳುತ್ತದೆ. ಇದರ ನೆನಪಿಗಾಗಿ ಇದೇ ಮಠದ ಆವರಣದಲ್ಲಿ ಮಲ್ಲಸರ್ಜನ ಕಟ್ಟೆ ಕಟ್ಟಿ ಪೂಜಿಸಲಾಗುತ್ತಿದೆ. ಇದನ್ನು ವೀಕ್ಷಿಸಲು ನಾಡಿನ ವಿವಿಧೆಡೆಯಿಂದ ಚನ್ನಮ್ಮನ ಅಭಿಮಾನಿಗಳು ಆಗಮಿಸುತ್ತಾರೆ. ಆದರೆ, ಅವರು ಇದರ ಐತಿಹ್ಯ ತಿಳಿಯುತ್ತಿಲ್ಲ.
ಮಲ್ಲಸರ್ಜರ ಗದ್ದುಗೆ ಇರುವ ಸ್ಥಳವನ್ನು ಇತ್ತೀಚಿಗೆ ನವೀಕರಿಸಲಾಗಿದ್ದು, ಆಕರ್ಷಕವಾದ ಮಂಟಪ ಕಟ್ಟಲಾಗಿದೆ. ಆದರೆ, ಮಲ್ಲಸರ್ಜನ ಕಟ್ಟೆ ಕುರಿತು ಮಾಹಿತಿಗಾಗಿ ಚಿಕ್ಕ ನಾಮಫಲಕ ಅಳವಡಿಸಿದ್ದು ಬಿಟ್ಟರೆ ಬೇರೆ ಯಾವ ಕ್ರಮವನ್ನೂ ಸರ್ಕಾರ ತೆಗೆದುಕೊಂಡಿಲ್ಲ. ಮಠಕ್ಕೆ ಬಂದವರು ಮಲ್ಲಸರ್ಜ ರಾಜ ಜೀವ ಬಿಟ್ಟ ಸ್ಥಳವನ್ನು ಹುಡುಕುವಂತಾಗಿದೆ.
ಮಲ್ಲಸರ್ಜ ದೊರೆ ಸಮಾಧಿ ಕುರಿತು ಗೊಂದಲ:ದುರದುಂಡೀಶ್ವರ ಮಠದ ಆವರಣದಲ್ಲಿ ಜೀವ ಬಿಡುವ ಮಲ್ಲಸರ್ಜ ಅವರ ಅಂತ್ಯಕ್ರಿಯೆನ್ನು ಇಲ್ಲಿಯೇ ನೆರವೇರಿಸಿ, ಸಮಾಧಿ ನಿರ್ಮಿಸಲಾಗಿದೆ ಎಂದು ಕೆಲ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದಿಷ್ಟು ಜನ ಕಿತ್ತೂರು ಮತ್ತು ವಣ್ಣೂರಿನಲ್ಲಿ ಸಮಾಧಿ ಇದೆ ಎಂದು ಪ್ರತಿಪಾದಿಸುತ್ತಿದ್ದಾರೆ. 2 ಶತಮಾನಗಳಿಂದಲೂ ಈ ಗೊಂದಲ ಮುಂದುವರಿದಿದೆ. ಈ ಬಗ್ಗೆ ಸಂಶೋಧನೆಯಾಗಿ ಸತ್ಯ ಹೊರತರಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಮಲ್ಲಸರ್ಜ ಆಡಳಿತದಲ್ಲಿ ಉತ್ತುಂಗಕ್ಕೇರಿದ್ದ ಕಿತ್ತೂರು:ಕಿತ್ತೂರು ಸಾಮ್ರಾಜ್ಯದಲ್ಲಿ 1782ರಿಂದ 1816ರವರೆಗೆ ಆಳ್ವಿಕೆ ನಡೆಸಿದ 11ನೇ ದೊರೆ ಮಲ್ಲಸರ್ಜ. ಅವರಿಗೆ ಇಬ್ಬರು ಪತ್ನಿಯರು. ರಾಣಿ ರುದ್ರಮ್ಮ ಮತ್ತು ರಾಣಿ ಚನ್ನಮ್ಮ. ಸಂಕಷ್ಟದ ಸಮಯದಲ್ಲಿ ಪತಿಯ ಬೆನ್ನಿಗೆ ನಿಂತು ಕಿತ್ತೂರನ್ನು ಶತ್ರುಗಳಿಂದ ರಕ್ಷಿಸಿದ ಕೀರ್ತಿ ಇಬ್ಬರೂ ರಾಣಿಯರಿಗೆ ಸಲ್ಲುತ್ತದೆ.