ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳ ಈ ರೀತಿಯ ವಿಡಿಯೋ ಬಿಡುಗಡೆ ಮಾಡುವುದೇ ಮಹಾ ಅಪರಾಧ. ಯಾರು ಮಾಡಿದ್ದಾರೋ ಅವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಅವರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಳವಿಕಾ ಅವಿನಾಶ್ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೂನ್ 4ರ ವರೆಗೆ ಪ್ರಜ್ವಲ್ ರೇವಣ್ಣ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸಂಸದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮಾತ್ರ ಎನ್ಡಿಎ ಮೈತ್ರಿಕೂಟದ ಸಂಸದರಾಗುತ್ತಾರೆ. ಹಾಗಾಗಿ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದವರು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕು ಮತ್ತು ಅಧಿಕಾರ ಜೆಡಿಎಸ್ ಪಕ್ಷಕ್ಕಿದೆ. ನಿನ್ನೆ ಅವರನ್ನು ಅಮಾನತ್ತು ಕೂಡ ಮಾಡಿದ್ದಾರೆ. ಇನ್ನೂ ಹರಿದಾಡುತ್ತಿರುವ ವಿಡಿಯೋಗಳ ಸತ್ಯಾನುಸತ್ಯತೆ ಏನು? ಯಾರು, ಯಾರ ಮೇಲೆ ತಪ್ಪು ಎಸಗಿದ್ದಾರೆ? ಎಂಬ ವಿಚಾರಗಳ ಬಗ್ಗೆ ಎಸ್ಐಟಿ ತಂಡ ತನಿಖೆ ನಡೆಸುತ್ತದೆ. ತಪ್ಪು ಎಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾದರೆ ಶಿಕ್ಷೆ ಆಗಲಿದೆ ಎಂದು ಹೇಳಿದರು.
ನೇಹಾ ಪ್ರಕರಣ ಮತ್ತು ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಕೇಸ್ ಎರಡೂ ಒಂದೇ ಅಲ್ಲ. ಅತ್ಯಂತ ಬರ್ಬರವಾಗಿ ಕಾಲೇಜು ಆವರಣದಲ್ಲಿ ನೇಹಾಳನ್ನು ಕೊಲೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಬಗ್ಗೆ ಮೃದು ಧೋರಣೆ ತೋರಿದ್ದರಿಂದ ಬಾಂಬ್ ಸ್ಫೋಟ ಸೇರಿದಂತೆ ಇಂಥ ಘಟನೆಗಳು ನಡೆಯುತ್ತಿವೆ. ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬ ವಾತಾವರಣವನ್ನು ರಾಜ್ಯದಲ್ಲಿ ಕಾಂಗ್ರೆಸ್ ನಿರ್ಮಿಸಿದೆ. ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದರೂ ಕೂಡ ಅವರು ಖಂಡಿಸುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಶ್ಲೀಲ ವಿಡಿಯೋ ಪ್ರಕರಣ ಅತ್ಯಂತ ದುರಾದೃಷ್ಕಕರ. ಇಡೀ ಸಮಾಜ ತಲೆ ತಗ್ಗಿಸುವಂಥದ್ದು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ರಿಲೀಸ್ ಮಾಡಿದ್ದನ್ನು ಖಂಡಿಸುತ್ತೇನೆ. ಈ ರೀತಿ ರಿಲೀಸ್ ಮಾಡಿರುವುದರಿಂದ, ಯಾರ ಮೇಲೋ ಪ್ರಹಾರ ಮಾಡುತ್ತೇವೆಂದು ಅದರಲ್ಲಿ ಸಿಲುಕಿರುವ ಮಹಿಳೆಯರ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದಾರೆ. ಇದು ದೊಡ್ಡ ಘೋರ ಅಪರಾಧ. ಆ ಮಹಿಳೆಯರ ಮುಖವನ್ನು ಬ್ಲರ್ ಮಾಡಬಹುದಾಗಿತ್ತು. ಅವರ ಗೌರವ ರಕ್ಷಿಸಬಹುದಾಗಿತ್ತು. ಅದು ಕೂಡ ಆಗಿಲ್ಲ. ಇದು ಏಕೆ ನಡೆಯಿತು? ಹೇಗೆ ನಡೆಯಿತು? ಎಂಬ ಬಗ್ಗೆ ರಾಜ್ಯ ಸರ್ಕಾರ ತನಿಖೆ ಮಾಡಬೇಕು. ಯಾರು ತಪ್ಪಿತಸ್ಥರಿದ್ದಾರೋ ಎಲ್ಲರ ವಿರುದ್ಧವೂ ಕಠಿಣ ಶಿಕ್ಷೆ ಆಗಬೇಕು. ಹೆಣ್ಣು ಮಕ್ಕಳ ಖಾಸಗಿತನಕ್ಕೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲವೆಂದು ತಮ್ಮ ಅಸಮಾಧಾನ ಹೊರಹಾಕಿದರು.