ಕರ್ನಾಟಕ

karnataka

ETV Bharat / state

ಮಹಾರಾಣಿ ಕಾಲೇಜು ಕಟ್ಟಡ ಕುಸಿತ: ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು - MAHARANI COLLEGE BUILDING COLLAPSES

ಮೃತ ಕಾರ್ಮಿಕನ ಕುಟುಂಬಕ್ಕೆ 50 ಲಕ್ಷ ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ಕೆಲಸ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

DIED WORKER AND MAHARANI COLLEGE BUILDING COLLAPSES
ಸಾವನ್ನಪ್ಪಿದ ಕಾರ್ಮಿಕ ಹಾಗೂ ಕುಸಿಯುತ್ತಿರುವ ಕಟ್ಟಡ (ETV Bharat)

By ETV Bharat Karnataka Team

Published : Jan 29, 2025, 3:33 PM IST

Updated : Jan 29, 2025, 4:57 PM IST

ಮೈಸೂರು: ಶಿಥಿಲಾವ್ಯಸ್ಥೆಯಲ್ಲಿ ಇದ್ದ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡ ನೆಲಸಮ ಮಾಡುವ ಸಂದರ್ಭದಲ್ಲಿ ಮಣ್ಣಿನಡಿ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ಮಹಾರಾಣಿ ವಿಜ್ಞಾನ ಕಾಲೇಜಿನ ಹಳೆಯ ಕಟ್ಟಡವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಏಕಾಎಕಿ ಮೇಲ್ಛಾವಣಿ ಹಾಗೂ ಗೋಡೆ ಕುಸಿದ ಪರಿಣಾಮ ಕಟ್ಟಡ ತೆರವು ಕಾರ್ಯಚರಣೆಗೆ ಬಂದಿದ್ದ ಕಾರ್ಮಿಕ ಮೃತಪಟ್ಟಿದ್ದಾನೆ. ಗೌಸಿಯ ನಗರದ 32 ವರ್ಷದ ಸದ್ದಾಂ ಹುಸೇನ್‌ ಮಂಗಳವಾರ ಸಂಜೆ ಕಟ್ಟಡದ ಅಡಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳದವರು ಸತತ 10 ಗಂಟೆಗಳ ಕಾರ್ಯಚರಣೆ ನಂತರ ಮಧ್ಯರಾತ್ರಿ 2 ಗಂಟೆಗೆ ಆತನ ಮೃತದೇಹವನ್ನು ಹೊರ ತೆಗೆದಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿ ಆತನ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಮೃತನ ಕುಟುಂಬಸ್ಥರ ಮಾತು (ETV Bharat)

ಅಣ್ಣ ಮನ್ಸೂರ್ ಖಾನ್ ಹೇಳಿದ್ದೇನು?: ಕಳೆದ ಎರಡು ದಿನಗಳಿಂದ ಕಾಲೇಜು ಕಟ್ಟಡದ ಕೆಲಸಕ್ಕೆ ಹೋಗಿದ್ದ. ತಾರಸಿ ಕುಸಿದು ಅವಘಡ ಸಂಭವಿಸಿದೆ. ಇಡೀ ಕುಟುಂಬಕ್ಕೆ ಅವನೇ ಅಧಾರವಾಗಿದ್ದ. ಅವನಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಸದ್ದಾಂ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ತುಂಬಾ ಬಡತನವಿದ್ದ ಕುಟುಂಬ. 1000 ರೂ. ಕೂಲಿಗೆ ಬಂದು ಪ್ರಾಣ ಕಳೆದುಕೊಂಡಿದ್ದಾನೆ. ಸರ್ಕಾರ 50 ಲಕ್ಷ ಪರಿಹಾರ ನೀಡಿ, ಅವನ ಹೆಂಡತಿಗೆ ಸರ್ಕಾರಿ ಕೆಲಸ ಕೊಟ್ಟು ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.

"ಅವನನ್ನು ಕರೆದುಕೊಂಡು ಬಂದ ಇಂಜಿನಿಯರ್ ಮೇಲೆ ಎಫ್​ಐಆರ್‌ ಹಾಕಬೇಕು. ಮೊದಲು ಕಟ್ಟಡಕ್ಕೆ ಭೇಟಿ ನೀಡಿ ಕೆಲಸ ನೀಡಬೇಕಿತ್ತು. ಹಳೇ ಕಟ್ಟಡದಲ್ಲಿ ಕೆಲಸ ಮಾಡಿಸುವಾಗ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ನಾನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಾದ ತನ್ವೀರ್ ಸೇಠ್ ಮತ್ತು ಹರೀಶ್ ಗೌಡ ಅವರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡುತ್ತೇನೆ" ಎಂದು ಮೃತ ಸದ್ದಾಂ ಸಂಬಂಧಿ ಸೈಯದ್ ಫಾರುಕ್ ಹೇಳಿದರು.

2022ರಲ್ಲೇ ಮಹಾರಾಣಿ ಕಾಲೇಜು ಕಟ್ಟಡದ ಒಂದು ಭಾಗ ಕುಸಿದಿತ್ತು: ಮಹಾರಾಣಿ ವಿಜ್ಞಾನ ಕಾಲೇಜು ಪಾರಂಪರಿಕ ಕಟ್ಟಡವಾಗಿದ್ದು, 108 ವರ್ಷಗಳ ಇತಿಹಾಸ ಇದೆ. ಆದರೆ, ಸರಿಯಾದ ನಿರ್ವಹಣೆಯಿಲ್ಲದೇ, 2022ರ ಅಕ್ಟೋಬರ್​ನಲ್ಲಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. ಆಗ ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಆಗಿರಲಿಲ್ಲ. ಇದರಿಂದ ಸರ್ಕಾರ ಕಳೆದ ಬಜೆಟ್​ನಲ್ಲಿ ಹೊಸದಾಗಿ ಮಹಾರಾಣಿ ಕಾಲೇಜಿನ ಕಟ್ಟಡ ಕಟ್ಟಲು ಅನುದಾನ ಘೋಷಣೆ ಮಾಡಿತ್ತು. ಹಾಗಾಗಿ ಕಾಮಗಾರಿ ಆರಂಭಿಸಿದ್ದು, ಕಳೆದ ನಾಲ್ಕು ದಿನಗಳಿಂದ ಕಟ್ಟಡದ ತೆರವು ಕಾರ್ಯಾಚರಣೆ ಕಳೆದ 4 ದಿನಗಳಿಂದ ನಡೆಯುತ್ತಿತ್ತು. ಮಂಗಳವಾರ ಸಂಜೆ 14 ಜನ ಕಟ್ಟಡ ತೆರವು ಕಾರ್ಯಚರಣೆಯಲ್ಲಿ ತೊಡಗಿದ್ದು, ಆ ಸಂದರ್ಭದಲ್ಲಿ ಎಲ್ಲರು ಟೀ ಕುಡಿಯಲು ಕಟ್ಟಡದ ಪಕ್ಕಕ್ಕೆ ಬಂದಿದ್ದರು. ಆಗ ಮೃತ ಸದ್ದಾಂ ಹುಸೇನ್‌ ಬಟ್ಟೆ ತರುವುದಾಗಿ ಹೋಗಿದ್ದು, ಆ ಸಂದರ್ಭದಲ್ಲಿ ಏಕಾಏಕಿ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆಗಳು ಕುಸಿದು ಬಿದ್ದಿದೆ. ಆತನ ಮೇಲೆ ಬಿದ್ದ ಪರಿಣಾಮ ಅಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ , ಸ್ಥಳೀಯ ಶಾಸಕ ಹರೀಶ್‌ ಗೌಡ ಹಾಗೂ ಮತ್ತೊಬ್ಬ ಶಾಸಕ ತನ್ವೀರ್‌ ಸೇಠ್‌ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನಿರ್ಮಾಣ ಹಂತದ ಕಟ್ಟಡ ಕುಸಿತ; ಅವಶೇಷಗಳಡಿ ಸಿಲುಕಿರುವ 25 ಕಾರ್ಮಿಕರು

Last Updated : Jan 29, 2025, 4:57 PM IST

ABOUT THE AUTHOR

...view details