ಬೆಂಗಳೂರು:ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ದ ಅಧಿಕಾರಿಗಳು ಗುರುವಾರ ಸಂತ್ರಸ್ತೆಯನ್ನು ವಿಕಾಸಸೌಧಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದರು.
ಬೆಳಗ್ಗೆೆ 11 ಗಂಟೆ ಸುಮಾರಿಗೆ ವಿಕಾಸಸೌಧಕ್ಕೆ ಸಂತ್ರಸ್ತೆಯೊಂದಿಗೆ ಆಗಮಿಸಿದ ಎಸ್‌ಐಟಿ, ಈ ಹಿಂದೆ ತೋಟಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಮುನಿರತ್ನಗೆ ನೀಡಿದ್ದ ಮೂರನೇ ಮಹಡಿಯ 334ನೇ ಕೋಣೆಗೆ ಕರೆದೊಯ್ದು ಮಹಜರು ನಡೆಸಿದರು. ಯಾವ ಸ್ಥಳದಲ್ಲಿ ಮುನಿರತ್ನ ಲೈಂಗಿಕ ದೌರ್ಜನ್ಯ ಎಸಗಿದರು ಎಂಬುದೂ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕೇಳಿ, ಸಂತ್ರಸ್ತೆಯಿಂದ ಲಿಖಿತ ಮತ್ತು ಮೌಖಿಕ ಹೇಳಿಕೆ ಪಡೆದುಕೊಂಡರು. ಈ ಪ್ರಕ್ರಿಯೆಯನ್ನು ವಿಡಿಯೋ ಮಾಡಿಕೊಳ್ಳಲಾಗಿದೆ.
ಮಧ್ಯಾಹ್ನ 1.30ರವರೆಗೆ ಕೋಣೆಯಲ್ಲೇ ಸ್ಥಳ ಮಹಜರು ನಡೆಸಿದ ಅಧಿಕಾರಿಗಳು, ಬಳಿಕ ಸಿಐಡಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ. ಈ ಹಿಂದೆ ಸಂತ್ರಸ್ತೆ ಕಗ್ಗಲಿಪುರ ಠಾಣೆಯಲ್ಲಿ ದೂರು ನೀಡುವಾಗ, ಮುನಿರತ್ನ ಸಚಿವರಾಗಿದ್ದಾಗ ವಿಕಾಸಸೌಧದಲ್ಲಿ ನೀಡಲಾಗಿದ್ದ ಅವರ ಕೊಠಡಿಯಲ್ಲೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಜೊತೆಗೆ ಇಲ್ಲಿಂದಲೇ ವಿಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಪೀಡಿಸುತ್ತಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯನ್ನು ಕರೆತಂದು ಮಹಜರು ಮಾಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.