ಬೆಂಗಳೂರು: ಪ್ರಯಾಗ್ ರಾಜ್‌ನಲ್ಲಿ ಸಾಗುತ್ತಿರುವ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭ ಮೇಳದಲ್ಲಿ ಭಾಗಿಯಾಗಬೇಕು ಎಂಬುದು ಅನೇಕರ ಮಹಾದಾಸೆಯಾಗಿದೆ. ಯಾತ್ರಿಗಳ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಇದೀಗ ವಂಚನೆಗೆ ಇಳಿದಿದ್ದಾರೆ. ಈ ಹಿನ್ನೆಲೆ ಪ್ರಯಾಗ್ರಾಜ್ ಪ್ರವಾಸಕ್ಕೆ ಹೋಗಬೇಕು ಎಂದು ತರಾತುರಿಯಲ್ಲಿ ಯಾವುದೇ ಟ್ರಾವೆಲ್ ಏಜೆನ್ಸಿ ನಂಬುವ ಮುನ್ನ ಎಚ್ಚರವಹಿಸುವುದು ಅವಶ್ಯಕವಾಗಿದೆ. ಕುಂಭ ಮೇಳಕ್ಕೆ ಸುಲಭದ ಪ್ಯಾಕೇಜ್ ನೀಡುವುದಾಗಿ ನಂಬಿಸಿ ಟ್ರಾವೆಲ್ ಏಜೆನ್ಸಿಯೊಂದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಏನಿದು ಪ್ರಕರಣ?: ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಬಿಡಿಎ ಲೇಔಟ್‌ನ ನಿವಾಸಿ ಪ್ರದೀಪ್ ಕುಂಭಮೇಳಕ್ಕೆ ಹೋಗುವ ಕುರಿತು ಆಲೋಚನೆ ಮಾಡಿದ್ದರು. ಇದರ ಸಲುವಾಗಿ ಪ್ಯಾಕೇಜ್ ವ್ಯವಸ್ಥೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಿದ್ದರು. ಈ ಸಂದರ್ಭದಲ್ಲಿ ಟ್ರಾವೆಲ್ಸ್ ಕಂಪನಿ ಪ್ರತಿನಿಧಿಗಳು ಎಂದು ಹೇಳಿಕೊಂಡು ಕರೆ ಬಂದಿದೆ. 'ನೀವು ಕುಂಭಮೇಳದಲ್ಲಿ ಭಾಗಿಯಾಗಲು ಪ್ರಯಾಗ್ ರಾಜ್‌ಗೆ ಹೋಗಲು ಇಚ್ಚಿಸುತ್ತಿದ್ದೀರಾ?! ನಾವು ಕಡಿಮೆ ಖರ್ಚಿನಲ್ಲಿ ಕುಂಭಮೇಳಕ್ಕೆ ಕರೆದೊಯ್ಯುತ್ತೇವೆ. ಯಾವುದೇ ರೀತಿಯ ತೊಂದರೆಯಾಗದಂತೆ ಪ್ರವಾಸ ಮುಗಿಸುವುದಾಗಿ ಭರವಸೆ ನೀಡುವ ಮೂಲಕ ನಂಬಿಸಿದ್ದಾರೆ.
ಪ್ರದೀಪ್ ಕೂಡ ಅವರ ಮಾತನ್ನು ನಂಬಿದ್ದಾರೆ. ಅಲ್ಲದೇ, ಬುಕ್ಕಿಂಗ್ ಕಂಪನಿ ಪ್ರವಾಸದ ವಿವರ, ಕಂಪನಿಯ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನ ವಿವರಗಳನ್ನ ವಾಟ್ಸ್ಆ್ಯಪ್‌ನಲ್ಲಿ ಕಳುಹಿಸಿದ್ದಾರೆ. ಇದಾದ ಬಳಿಕ ಮುಂಗಡ ಬುಕ್ಕಿಂಗ್ ಶುಲ್ಕ, ಮತ್ತಿತರ ಶುಲ್ಕಗಳ ಹೆಸರಿನಲ್ಲಿ ಹಂತ -ಹಂತವಾಗಿ 64 ಸಾವಿರ ರೂ ಹಣವನ್ನ ಪಡೆದುಕೊಂಡಿದ್ದಾರೆ. ಹಣ ಸ್ವೀಕರಿಸಿದ ಬಳಿಕ ಫೋನ್ ಸಂಪರ್ಕಕ್ಕೆ ಸಿಗದೇ ವಂಚಿಸಿರುವುದು ಬೆಳಕಿಗೆ ಬಂದಿದೆ.