ಬೆಳಗಾವಿ: "ದೀಪಾವಳಿ ನಂತರ ಸರ್ಕಾರ ಪತನ ಆಗುತ್ತದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, "ಬಿಜೆಪಿಯವರು ಇನ್ನೂ ನಾಲ್ಕು ದೀಪಾವಳಿ ಕಾಯಬೇಕು. ಅಲ್ಲಿಯವರೆಗೆ ಮನೆಯಲ್ಲಿ ದೀಪಾವಳಿ ಮಾಡೋಕೆ ಹೇಳಿ" ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಸಾಹೇಬ್ರನ್ನು ಇಳಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ನ್ಯಾಯಾಲಯ ಎನ್ನುವುದು ಒಂದು ವ್ಯವಸ್ಥೆ. ಅದು ತಾನಾಗಿಯೇ ನಡೆದುಕೊಂಡು ಹೋಗುತ್ತದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎನ್ನುವುದು ನಮ್ಮೆಲ್ಲರ ಆಸೆ. ಹಾಗಾಗಿ, ಅವರೇ ಮುಂದುವರಿಯುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕೇಸ್ಗಳು ಕೋರ್ಟ್ನಲ್ಲಿವೆ. ಇವರಿಗೆ ಸಿದ್ದರಾಮಯ್ಯ ಅಷ್ಟೇ ಯಾಕೆ ಕಾಣಿಸುತ್ತಾರೆ" ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, "ಇನ್ನು ನಮ್ಮ ತಂದೆಯವರು ಮುಖ್ಯಮಂತ್ರಿ ಆಗಿದ್ದಾಗ ಬೇಕಾದಷ್ಟು ಕೇಸ್ಗಳನ್ನು ನೋಡಿದ್ದೇವೆ. ಇದರ ಬಗ್ಗೆ ಈಗ ಚರ್ಚೆ ಮಾಡುವ ಅವಶ್ಯಕತೆ ಇಲ್ಲ" ಎಂದರು.
ಸಿಎಂ ರೇಸ್ನಲ್ಲಿ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಪೈಪೋಟಿ ಇದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, "ನಾನು ಅಷ್ಟು ದೊಡ್ಡ ಮನುಷ್ಯ ಅಲ್ಲ. ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ" ಎಂದು ಸ್ಪಷ್ಟಪಡಿಸಿದರು.