ರಾಯಚೂರು:ಗರ್ಭಿಣಿಯರ ಸಾವುಗಳ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ರಾಯಚೂರಿನಲ್ಲಿ ಇಂದು ಚಾಲನೆ ನೀಡಲಾಯಿತು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ದಿನೇಶ ಗೂಂಡೂರಾವ್, "ತಾಯಂದಿರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ ಆಗಿದೆ. ಗುಣಮಟ್ಟದ ಸೇವೆ ನೀಡುವ ಸಲುವಾಗಿ ಈ ಅಭಿಯಾನ ಶುರು ಮಾಡಿದ್ದೇವೆ. ರಾಜ್ಯಾದ್ಯಂತ ಈ ಯೋಜನೆ ತಾಲೂಕು, ಜಿಲ್ಲೆಯಲ್ಲಿ ನಡೆಯಲಿದೆ. ರಾಯಚೂರು ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. 1 ಲಕ್ಷಕ್ಕೆ 64 ಬಾಣಂತಿಯರು ಸಾವು ಆಗುತ್ತಿದೆ ಎನ್ನುವುದು ಸೂಚ್ಯಂಕದಿಂದ ವರದಿಗಳು ಹೇಳುತ್ತಿವೆ. ಇವುಗಳನ್ನು ಕಡಿಮೆ ಮಾಡುವ ಪ್ರಯತ್ನ ಹಾಗೂ ಈ ಮರಣ ಸಂಖ್ಯೆ ಶೂನ್ಯಕ್ಕೆ ತರಬೇಕಾಗಿದೆ" ಎಂದರು.
ಪ್ರತಿ ಬಾಣಂತಿಯರ ಆರೋಗ್ಯದ ಟ್ರ್ಯಾಕ್ ಆಗಬೇಕು:"ಅಭಿಯಾನದ ಮುಖಾಂತರ ಅಪಾಯದಲ್ಲಿ ಇರುವ ಗರ್ಭಿಣಿಯರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತೆ. ಗರ್ಭಿಣಿಯರನ್ನು ಮಾನಸಿಕ ಹಾಗೂ ದೈಹಿಕವಾಗಿ ರೆಡಿ ಮಾಡುವುದೇ ಅಭಿಯಾನದ ಉದ್ದೇಶವಾಗಿದೆ. ಮೊದಲ ಮತ್ತು ಮೂರನೇ ತ್ರೈಮಾಸಿಕ ತಪಾಸಣೆ ಕಡ್ಡಾಯ ಆಗಬೇಕು. ಪ್ರತಿ ಬಾಣಂತಿಯರ ಆರೋಗ್ಯ ಟ್ರ್ಯಾಕ್ ಮಾಡಬೇಕು. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ವೈದ್ಯರು ಇಲ್ಲದೇ ಬಾಣಂತಿ ಸಾವು ಆಯ್ತು. ಪ್ರಸೂತಿ ತಜ್ಞರು ಆಸ್ಪತ್ರೆಯಲ್ಲಿ ಇರಬೇಕು. ತಾಲೂಕು ಆಸ್ಪತ್ರೆಯಲ್ಲಿ ದಿನದ 24 ಗಂಟೆ ಚಿಕಿತ್ಸೆ ಸಿಗಬೇಕು. ತಾಲೂಕು ಆಸ್ಪತ್ರೆ ಹೆಚ್ಚಿನ ಸೇವೆಗಳು ಸಿಗುವಂತೆ ಮಾಡುವ ಪ್ರಯತ್ನ ನಡೆದಿದೆ. ತಾಲೂಕು ಆಸ್ಪತ್ರೆಗಳು ಮಿನಿ ಜಿಲ್ಲಾಸ್ಪತ್ರೆಯಂತೆ ಇರಬೇಕು. ಅದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಹೇಳಿದ್ದಾರೆ. ಅದಕ್ಕಾಗಿ ನಮ್ಮ ಪ್ರಯತ್ನ ಮುಂದುವರೆದಿದೆ" ಎಂದು ತಿಳಿಸಿದರು.