ಹಾಸನ:ತಾಳಿ ಕಟ್ಟುವ ವೇಳೆ ಸಿನಿಮೀಯ ರೀತಿಯಲ್ಲಿ ಮದುವೆ ಮುರಿದು ಬಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಗುರುವಾರ ನಡೆಯಿತು. ನವ ವಧು-ವರರನ್ನು ಹರಸಲು ಬಂದಿದ್ದ ನೂರಾರು ಮಂದಿ ನಿರಾಶೆಗೊಂಡರು. ಶುಭ ಕಾರ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಎರಡೂ ಮನೆಯವರು ಕಂಗಾಲಾದರು.
ನಡೆದಿದ್ದೇನು?: ಪ್ರೀತಿ ಮುಚ್ಚಿಟ್ಟ ಯುವತಿ ಬೇರೊಬ್ಬನ ಜೊತೆ ಹಸೆಮಣೆ ಏರುತ್ತಿದ್ದ ಸುದ್ದಿ ತಿಳಿದು ಪ್ರಿಯಕರ ಕಲ್ಯಾಣಮಂಟಪಕ್ಕೆ ಆಗಮಿಸಿದ್ದಾನೆ. ಹೀಗೆ ಬಂದವನೇ ವರನ ಕೈಯಲ್ಲಿದ್ದ ತಾಳಿ ಕಸಿದುಕೊಂಡ. ತಕ್ಷಣವೇ ಆತನನ್ನು ಹಿಡಿದ ವಧುವಿನ ಮನೆಯವರು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರ ವಿಚಾರಣೆಯ ಬಳಿಕ ಇಬ್ಬರ ನಡುವಿನ ಪ್ರೇಮ್ ಕಹಾನಿ ಬಯಲಾಯಿತು.
ಸಂಪೂರ್ಣ ವಿವರ: ಬೇಲೂರು ಪಟ್ಟಣದ ಯುವತಿ ಹಾಗೂ ಶಿವಮೊಗ್ಗ ಜಿಲ್ಲೆಯ ಯುವಕನಿಗೆ ಮದುವೆ ನಿಶ್ಚಯವಾಗಿದ್ದು, ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಾಹ ಕಾರ್ಯಕ್ರಮ ನಿಗದಿಯಾಗಿತ್ತು. ಇನ್ನೇನು ತಾಳಿ ಕಟ್ಟಿ ಮಂತ್ರಾಕ್ಷತೆ ಹಾಕಿ, ಮಂಗಳವಾದ್ಯ ಮೊಳಗಬೇಕು ಎನ್ನುವಷ್ಟರಲ್ಲಿ ಥೇಟ್ ಸಿನಿಮಾ ರೀತಿಯಲ್ಲೇ ಕಲ್ಯಾಣಮಂಟಪಕ್ಕೆ ಹಾಸನ ಹೊರವಲಯದ ಗವೇನಹಳ್ಳಿಯ ಯುವಕ ತನ್ನ ಕೆಲವು ಸ್ನೇಹಿತರೊಂದಿಗೆ ನುಗ್ಗಿದ್ದಾನೆ. ನೂರಾರು ಮಂದಿಯ ಸಮ್ಮುಖದಲ್ಲೇ ವಧುವಿನ ಕೊರಳಿಗೆ ಮದುಮಗ ಕಟ್ಟಬೇಕಿದ್ದ ತಾಳಿಯನ್ನು ಕಿತ್ತುಕೊಂಡಿದ್ದಾನೆ.
ಆ ಬಳಿಕ, "ಆಕೆ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನೊಂದಿಗೆ ಮದುವೆ ಮಾಡಿ" ಎಂದು ಪಟ್ಟು ಹಿಡಿದು ನಿಂತುಬಿಟ್ಟ. ಈ ದೃಶ್ಯ ಕಂಡು ಮದುವೆ ಮನೆಯಲ್ಲಿದ್ದವರು ಅರೆಕ್ಷಣ ಆತಂಕಗೊಂಡರು. ಕಲ್ಯಾಣಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣಯಿತು. ತಕ್ಷಣವೇ ಯುವಕನನ್ನು ಹಿಡಿದುಕೊಂಡ ವಧುವಿನ ಕಡೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಯುವಕ ಹಾಗೂ ವಧುವನ್ನು ವಶಕ್ಕೆ ಪಡೆದು ಕರೆದೊಯ್ದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಧು, "ನನಗೆ ಈ ಯುವಕ ಯಾರೆಂದು ಗೊತ್ತಿಲ್ಲ" ಎಂದು ಹೇಳಿದ್ದಾಳೆ.
ಇದರಿಂದ ಕೋಪಗೊಂಡ ಯುವಕ, ತಮ್ಮ ಲವ್ ಸ್ಟೋರಿಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದಾನೆ. ಯುವತಿ ಮಾಡಿರುವ ಮೆಸೇಜ್‌ಗಳು, ಫೋಟೋಗಳನ್ನು ಪೊಲೀಸರಿಗೆ ತೋರಿಸಿದ್ದಾನೆ. ಈ ಇಬ್ಬರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರೂ ಕೂಡಾ ತಮ್ಮ ಪೋಷಕರಿಗೆ ಈ ವಿಷಯ ತಿಳಿಸಿರಲಿಲ್ಲ.