ಬಳ್ಳಾರಿ: ಯುವತಿ ಮತ್ತವರ ಮನೆಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಭಗ್ನ ಪ್ರೇಮಿಯೊಬ್ಬ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಂಡೂರಿನ ಯಶವಂತನಗರ ಬಳಿ ನಡೆದಿದೆ. ನವೀನ್ ಕುಮಾರ್ ಮೃತ ಭಗ್ನ ಪ್ರೇಮಿ. ಹಲ್ಲೆಯಿಂದ ಯುವತಿ ಮತ್ತವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವತಿಯ ಅಣ್ಣನಿಗೆ ಬಲವಾಗಿ ಪೆಟ್ಟು ಬಿದ್ದಿದೆ.
ಹೊಸಪೇಟೆ ತಾಲೂಕಿನ ಪಿ.ಕೆ. ಹಳ್ಳಿ ಮೂಲದ ನವೀನ್ ಕುಮಾರ್ ಎಂಬಾತ ಯುವತಿಯನ್ನು ಬಲವಂತದಿಂದ ಕರೆದುಕೊಂಡು ಹೋಗಿ ತಾಳಿ ಕಟ್ಟಿದ್ದು, ನಿನ್ನೆ (ಶುಕ್ರವಾರ) ಮಧ್ಯಾಹ್ನ ಇಲ್ಲಿಗೆ ಬಂದು ಜಗಳ ತೆಗೆದಿದ್ದ. ನಿನ್ನನ್ನು ಮದುವೆ ಆಗಿದ್ದು, ತನ್ನ ಮನೆಗೆ ಬರುವಂತೆ ಯುವತಿಗೆ ಒತ್ತಾಯಿಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಮಚ್ಚಿನಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆಂದು ಹಲ್ಲೆಗೊಳಗಾದ ಯುವತಿಯ ಪೋಷಕರು ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಮಾಹಿತಿ ನೀಡಿದರು.
ಘಟನೆ ಬಳಿಕ ಆರೋಪಿ ನವೀನಕುಮಾರ್ ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಗಾಗಿ ಹುಡುಕುತ್ತಿದ್ದಾಗ ಆತ ಇಂದು ಬೆಳಗ್ಗೆ (ಶನಿವಾರ) ಯಶವಂತನಗರ ಬಳಿಯ ರೈಲ್ವೆ ಹಳಿಯಲ್ಲಿ ಮೃತಪಟ್ಟಿರುವ ಮಾಹಿತಿ ತಿಳಿದು ಬಂದಿತು. ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದರಿಂದ ರೈಲ್ವೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದರು.