ಕರ್ನಾಟಕ

karnataka

ETV Bharat / state

ಮತ ಎಣಿಕೆಗೆ ಕ್ಷಣಗಣನೆ: ರಾಜ್ಯದ 29 ಕೇಂದ್ರಗಳಲ್ಲಿ ಸಕಲ ಸಿದ್ಧತೆ, 13 ಸಾವಿರ ಸಿಬ್ಬಂದಿ ನೇಮಕ - Lok Sabha Election Results 2024 - LOK SABHA ELECTION RESULTS 2024

ಕರ್ನಾಟಕದ 29 ಮತ ಎಣಿಕೆ ಕೇಂದ್ರಗಳಲ್ಲಿ ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆ 2024ರ ಮತ ಎಣಿಕೆಗಾಗಿ 13 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇವಿಎಂ (ಸಂಗ್ರಹ ಚಿತ್ರ)
ಇವಿಎಂ (ಸಂಗ್ರಹ ಚಿತ್ರ) (IANS)

By PTI

Published : Jun 3, 2024, 5:58 PM IST

ಬೆಂಗಳೂರು: ಮಂಗಳವಾರ ನಡೆಯಲಿರುವ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ರಾಜ್ಯದ 29 ಎಣಿಕೆ ಕೇಂದ್ರಗಳಲ್ಲಿ 13,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳ 14 ಸ್ಥಾನಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ಮತ್ತು ಉತ್ತರ ಜಿಲ್ಲೆಗಳ ಇತರ 14 ಜಿಲ್ಲೆಗಳಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆದಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ತಲಾ ಒಂದು ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ, ತುಮಕೂರಿನಲ್ಲಿ ಎರಡು ಸ್ಥಳಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಟ್ಟು ಎಣಿಕೆ ಕೇಂದ್ರಗಳ ಸಂಖ್ಯೆ 29 ಆಗಿದೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, "ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ ಮತ್ತು ರಾಜ್ಯದ 29 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ವೀಕ್ಷಕರು ಸೇರಿದಂತೆ 13,173 ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ" ಎಂದು ಅವರು ಹೇಳಿದರು.

"ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ತರಬೇತಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಪ್ರತಿ ಎಣಿಕೆ ಕೇಂದ್ರದಲ್ಲಿ ಇವಿಎಂ ಮತ್ತು ಅಂಚೆ ಮತಪತ್ರಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಈ ಪ್ರತಿ ಎಣಿಕೆ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ (ಕಂಪ್ಯೂಟರ್ ಗಳು, ಜೆರಾಕ್ಸ್, ಫ್ಯಾಕ್ಸ್, ಪ್ರಿಂಟರ್‌ಗಳೊಂದಿಗೆ) ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ವರದಿಗಾರರು ತಮ್ಮ ಮಾಧ್ಯಮ ಸಂಸ್ಥೆಗಳಿಗೆ ವರದಿ ಮಾಡಲು ಸಹಾಯಕವಾಗಲಿದೆ" ಎಂದು ತಿಳಿಸಿದರು.

ಎಲ್ಲೆಲ್ಲಿ ಮತ ಎಣಿಕೆ: ಬೆಂಗಳೂರು ಕ್ಷೇತ್ರದ ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ (ಬೆಂಗಳೂರು ಕೇಂದ್ರ ಕ್ಷೇತ್ರ), ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠಲ್ ಮಲ್ಯ ರಸ್ತೆ (ಬೆಂಗಳೂರು ಉತ್ತರ ಕ್ಷೇತ್ರ) ಮತ್ತು ಜಯನಗರದ ಎಸ್ಎಸ್ಎಂಆರ್​ವಿ ಕಾಲೇಜು (ಬೆಂಗಳೂರು ದಕ್ಷಿಣ ಕ್ಷೇತ್ರ) ಮತ ಎಣಿಕೆ ಕೇಂದ್ರಗಳಲ್ಲಿ 2,400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಬಿಗಿ ಭದ್ರತೆಯಲ್ಲಿ ಸುಗಮವಾಗಿ ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಪೊಲೀಸ್ ಭದ್ರತೆ: ಮತ ಎಣಿಕೆಗಾಗಿ ಬೆಂಗಳೂರು ನಗರ ಪೊಲೀಸ್ ಘಟಕದಿಂದ ಒಟ್ಟು 1,524 ಅಧಿಕಾರಿಗಳು/ ಸಿಬ್ಬಂದಿ, 13 ಸಶಸ್ತ್ರ ಮೀಸಲು ಘಟಕಗಳು ಮತ್ತು ನಾಲ್ಕು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ಸಿವಿಲ್ ಮತ್ತು ನಗರ ಸಶಸ್ತ್ರ ಮೀಸಲು ಘಟಕಗಳು ಸೇರಿದಂತೆ 516 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮೂರು ಪಾಳಿಗಳಲ್ಲಿ ಸ್ಟ್ರಾಂಗ್ ರೂಮ್ ಭದ್ರತಾ ಕರ್ತವ್ಯವನ್ನು ನಿರ್ವಹಿಸಲು ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರಗಳ ಸುತ್ತ ಸಂಚಾರ ದಟ್ಟಣೆಗೆ ಅಡ್ಡಿಯಾಗದಂತೆ 400 ಕ್ಕೂ ಹೆಚ್ಚು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

ಮೂರು ಮತ ಎಣಿಕೆ ಕೇಂದ್ರಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಗರದ ಒಟ್ಟು 2,400 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಮದ್ಯ ಮಾರಾಟ ನಿಷೇಧ: ಸೋಮವಾರ ಮಧ್ಯರಾತ್ರಿಯಿಂದ ಜೂನ್ 4ರ ಮಧ್ಯರಾತ್ರಿಯವರೆಗೆ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಮತ್ತು ಮಂಗಳವಾರ ಬೆಳಗ್ಗೆ 6ರಿಂದ ಮಂಗಳವಾರ ಮಧ್ಯರಾತ್ರಿಯವರೆಗೆ ಬೆಂಗಳೂರಿನಲ್ಲಿ ಸಿಆರ್​ಪಿಸಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್‌ಪಿ) ಮತ್ತು ನಗರ ಸಶಸ್ತ್ರ ಮೀಸಲು ತುಕಡಿಗಳನ್ನು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಸಂಸದ Vs ಹೃದಯ ತಜ್ಞ: ಜನ ಮತ ಯಾರಿಗೆ? - BENGALURU RURAL CONSTITUENCY

ABOUT THE AUTHOR

...view details