ಬೆಂಗಳೂರು: ಕಣದಲ್ಲಿನ ಹುರಿಯಾಳುಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಮತದಾರರು 'ನೋಟಾ' ಬಳಸಿ ಹಕ್ಕು ಚಲಾಯಿಸಲು ಅವಕಾಶವಿದೆ. ಅಂತೆಯೇ ಲೋಕಸಭೆ ಚುನಾವಣೆಯಲ್ಲಿ ಮತದಾರರು ಈ ಬಾರಿಯೂ ನೋಟಾ ಬಟನ್ ಒತ್ತಿ, ಯಾವ ಅಭ್ಯರ್ಥಿಗೂ ತಮ್ಮ ಮತ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಈ ಬಾರಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 2,18,343 ಮತದಾರರು ನೋಟಾ ವೋಟು ಹಾಕಿದ್ದಾರೆ. ಅಂದರೆ ಒಟ್ಟು ಮತದಾನದ ಶೇ.3.43ರಷ್ಟು ಮತದಾರರು ಅಸಮಾಧಾನ ಹೊರಹಾಕಿದ್ದಾರೆ.
ನೋಟಾ ಆಟದಲ್ಲಿ ರಾಜ್ಯಕ್ಕೆ 12ನೇ ಸ್ಥಾನ:ದೇಶಾದ್ಯಂತ ಈ ಬಾರಿ ನೋಟಾ ಆಟ ಜೋರಾಗಿದೆ. ಬಿಹಾರದಲ್ಲಿ 8,99,616 (14.12%) ಮತದಾರರು ನೋಟಾ ಮತ ಹಾಕಿದ್ದಾರೆ. ಈ ಮೂಲಕ ಬಿಹಾರದಲ್ಲಿ ಅತೀ ಹೆಚ್ಚು ನೋಟಾ ವೋಟು ಬಿದ್ದಿವೆ. ಹಾಗೆಯೇ ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು 6,36,848 (9.99%) ನೋಟಾ ಮತಗಳು ದಾಖಲಾಗಿವೆ. ಇನ್ನು 12 ಸ್ಥಾನದಲ್ಲಿರುವ ಕರ್ನಾಟಕದಲ್ಲಿ 2,18,343 (3.43%) ಮತಗಳು ನೋಟಾಗೆ ಬಂದಿವೆ.
ಅತೀ ಹೆಚ್ಚು ನೋಟಾ ದಾಖಲಾದ ಕ್ಷೇತ್ರಗಳು: ಈ ಬಾರಿ ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ನೋಟಾ ವೋಟು ದಾಖಲಾಗಿವೆ. ಕರಾವಳಿ ಜಿಲ್ಲೆಯಲ್ಲಿ ಚಲಾವಣೆಯಾದ ಮತಗಳಲ್ಲಿ 23,576 ಅಂದರೆ ಶೇ.1.69ರಷ್ಟು ಮತದಾರರು ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 13,554 (0.77%) ಮತ್ತು ಮೂರನೇ ಸ್ಥಾನದಲ್ಲಿರುವ ಬೆಂಗಳೂರು ಕೇಂದ್ರದಲ್ಲಿ 12,126 (0.92%) ಮತಗಳು ನೋಟಾಗೆ ಬಿದ್ದಿವೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 11,269 (0.92%) ಮತ್ತು ಹಾವೇರಿಯಲ್ಲಿ 10,865 (0.78%) ಮತದಾರರು ಯಾವ ಅಭ್ಯರ್ಥಿಯನ್ನೂ ಬೆಂಬಲಿಸಿಲ್ಲ.
ಯಾವ ಕ್ಷೇತ್ರದಲ್ಲಿ ಅತೀ ಕಡಿಮೆ ನೋಟಾ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ರಾಜ್ಯದಲ್ಲೇ ಅತೀ ಕಡಿಮೆ ನೋಟಾ ವೋಟು ದಾಖಲಾಗಿವೆ. ಈ ಕ್ಷೇತ್ರದಲ್ಲಿ ಕೇವಲ 2,608 (0.92%) ಮತಗಳು ನೋಟಾಗೆ ಬಂದಿವೆ.