ಮೈಸೂರು:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ ನೇರ ಪೈಪೋಟಿ ಇರುವುದು ಗೊತ್ತೇ ಇದೆ. ಇಲ್ಲಿ ನಡೆಯುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜಮನೆತನದ ನಡುವಿನ ಪೈಪೋಟಿ ಎಂದೇ ಬಿಂಬಿತವಾಗುತ್ತಿದ್ದು, ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮೂರು-ಮೂರು ಬಾರಿ ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ಸೇರಿದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದು, ಮೈತ್ರಿ ಅಭ್ಯರ್ಥಿಗೆ ಬಲ ಹೆಚ್ಚಿಸಿದೆ.
ತವರು ಜಿಲ್ಲೆ ಗೆಲ್ಲಲು ಮುಖ್ಯಮಂತ್ರಿ ಕಸರತ್ತು: ಕಳೆದ 10 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ಗೆಲ್ಲಲೇಬೇಕೆಂದು ಸ್ವತಃ ಮುಖ್ಯಮಂತ್ರಿಗಳೇ ಪ್ರಚಾರ ಮಾಡಿದ್ದರು. ಮುಖ್ಯಮಂತ್ರಿಗಳು ಲೋಕಾಸಭಾ ಚುನಾವಣೆಯ ದಿನಾಂಕ ಪ್ರಕಟವಾದ ಮೇಲೆ ನಾಮಪತ್ರ ಸಲ್ಲಿಕೆಗೆ ಹಾಗೂ ಚುನಾವಣಾ ಪ್ರಚಾರಕ್ಕೆ ಮೂರು ಬಾರಿ ಮೂರು ದಿನಗಳ ಕಾಲ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಹೇಗಾದರೂ ಮಾಡಿ ತವರು ಜಿಲ್ಲೆಯನ್ನ ಗೆಲ್ಲಲು ತಂತ್ರ ಮಾಡಿದ್ದು, ಅದರಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತ ಪಡೆಯಲು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉಸ್ತುವಾರಿ ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ವಹಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಒಕ್ಕಲಿಗ ಮತದಾರರನ್ನು ಸೆಳೆಯಲು ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೆಪ ಮಾತ್ರ, ಸ್ಪರ್ಧೆ ಇರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ, ಹಾಗೂ ರಾಜಮನೆತನದ ನಡುವೆ ಎಂದೇ ಬಿಂಬಿತವಾಗಿದೆ.
ಮೈತ್ರಿ ಅಭ್ಯರ್ಥಿ ಗೆಲುವಿಗೆ ರಾಜಮನೆತನ ಹಾಗೂ ಮೋದಿ ಬಲ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅಚ್ಚರಿಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ್ ಒಡೆಯರ್ಗೆ ತಮ್ಮ ಪೂರ್ವಜರು ಮಾಡಿರುವ ಜನಪರ ಕೆಲಸಗಳು ಹಾಗೂ ರಾಜಮನೆತನದ ಬಗ್ಗೆ ಇಲ್ಲಿಯ ಜನರಿಗೆ ಅಪಾರ ಗೌರವವಿದೆ. ಬಿಜೆಪಿ ಪಕ್ಷದ ಮತಗಳನ್ನ ಒಂದುಗೂಡಿಸುವ ನರೇಂದ್ರ ಮೋದಿ ಅವರ ಪ್ರಚಾರ ಹಾಗೂ ಒಕ್ಕಲಿಗ ಮತಗಳನ್ನ ಒಂದುಗೂಡಿಸುವ HD ಕುಮಾರಸ್ವಾಮಿ ಹಾಗೂ H.D ದೇವೇಗೌಡ ಹಾಗೂ ಲಿಂಗಾಯತ ಮತಗಳ ಕ್ರೂಢೀಕರಿಸಲು ಸಹಾಯಕವಾಗಿರುವ ಮಾಜಿ ಮುಖ್ಯಮಂತ್ರಿ B.S ಯಡಿಯೂರಪ್ಪ ಅವರ ಪ್ರಚಾರ ರಾಜವಂಶಸ್ಥ ಯದುವೀರ್ ಅವರ ಗೆಲುವಿಗೆ ಸಹಾಯಕ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಮಡಿಕೇರಿ ಹಾಗೂ ಮೈಸೂರು ನಗರ, ಹುಣಸೂರು, ಪಿರಿಯಾಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ನಡೆಸಿರುವ ಮೈತ್ರಿ ಅಭ್ಯರ್ಥಿ ಜನಗಳ ತೀರ್ಪುನ ಸ್ವಾಗತಿಸುತ್ತೇನೆ ಎಂಬ ಈ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಅವರಲ್ಲಿ ಗೆಲುವಿನ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ. ಇದಕ್ಕೆ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು. ಮೈಸೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ರಾಜಮನೆತನ ಅವರ ಕೊಡುಗೆ ಸ್ಮರಿಸಿ, ಗೆಲುವಿಗೆ ಕರೆ ನೀಡಿದರು. ಇದು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಸಹಕಾರಿ ಆಗಲಿದೆ ಎನ್ನಲಾಗ್ತಿದೆ.