ಹಾಸನ:ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಂಡರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಭರವಸೆ ನೀಡಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಈ ಹಿಂದೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿ ಇದೀಗ ಮುಂದಿನ ಚುನಾವಣೆಗೆ ಸಜ್ಜಾಗಿದ್ದಾರೆ. ವಿರೋಧ ಪಕ್ಷಗಳು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಅವರು ಏನೇ ಪ್ರಯತ್ನ ಮಾಡಿದರೂ ದೇಶದ ಬಗ್ಗೆ ಯೋಚಿಸುವ, ಜನಸಾಮಾನ್ಯರು, ಮತದಾರರು ಮೋದಿಯವರಿಗೇ ಮತ ನೀಡುವ ಮೂಲಕ ಅವರನ್ನು ಮತ್ತೆ ಮೂರನೇ ಸಲ ಪ್ರಧಾನಿಯಾಗಿ ಮಾಡುವುದು ನಿಶ್ಚಿತ ಎಂದರು.
ಬಿಜೆಪಿ ಹೈಕಮಾಂಡ್ ಈವರೆಗೆ ದೇಶದಲ್ಲಿ ಯಾವೊಬ್ಬ ಅಭ್ಯರ್ಥಿಯನ್ನೂ ಘೋಷಣೆ ಮಾಡಿಲ್ಲ. ಆದರೆ ಮೈತ್ರಿಯಡಿಯಲ್ಲಿ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ಬಿಜೆಪಿ-ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ. ಹಾಸನದಲ್ಲಿ ಪ್ರೀತಂ ಗೌಡ ಸೇರಿದಂತೆ ಕೆಲವು ಬಿಜೆಪಿ ನಾಯಕರುಗಳ ಜೊತೆ ಮಾತನಾಡಿದ್ದೇನೆ. ಯಾರಿಗೇ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕೇವಲ ಭಾವನಾತ್ಮಕ ವಿಚಾರಗಳನ್ನು ತಂದು ಜನರ ನಡುವೆ ಆತಂಕದ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಸಾಮಾನ್ಯ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ, ರಾಮಮಂದಿರ ಕಟ್ಟಿದ್ದೇವೆ. ಅಲ್ಲದೇ ಜನಸಾಮಾನ್ಯರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿದ್ದೇವೆ. ಜಿಎಸ್‌ಟಿ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿದೆ ಎಂದರು.
ಇದನ್ನೂಓದಿ:ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳ ಮುಖಾಮುಖಿ: ಗೀತಾ ಶಿವರಾಜ್ಕುಮಾರ್ಗೆ ಸಿಗುವುದೇ ಗೆಲುವು?