ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಾಂಗ್ರೆಸ್ ನಿದ್ದೆಗೆಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ಶಿಕಾರಿಪುರಕ್ಕೆ ಎರಡು ದಿನಗಳ ಮತ ಪ್ರಚಾರಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆ ಮೀರಿ ಬಿಜೆಪಿ ಪರ ಒಲವು ಕಾಣಿಸುತ್ತಿದೆ ಎಂದರು.
ರಾಜ್ಯದ ಮನೆ ಮನೆಯಲ್ಲಿ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕೆಂದು ಹರಸುತ್ತಿದ್ದಾರೆ. ಈ ಬಾರಿ 28 ಸ್ಥಾನಗಳು ಬರುತ್ತವೆ. ಕಾಂಗ್ರೆಸ್ ದಿಕ್ಕಾಪಾಲಾಗುತ್ತದೆ ಎಂದು ಭವಿಷ್ಯ ನುಡಿದರು. ಇದೇ ವೇಳೆ, ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದರೆ ಅದು ಪ್ರಪಂಚದ 8ನೇ ಅದ್ಬುತ ಎಂದ ಅವರು, ಜನರು ಮೋದಿ ಗ್ಯಾರಂಟಿ ನೋಡುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ನೋಡುತ್ತಿಲ್ಲ ಎಂದರು.
ಈಶ್ವರಪ್ಪ ನಮ್ಮೊಂದಿಗೆ ಕೈ ಜೋಡಿಸಲಿ:ಈಶ್ವರಪ್ಪ ಹಿರಿಯರು. ಪಕ್ಷ ಕಟ್ಟಲು ಅವರದೂ ದೊಡ್ಡ ಪಾಲಿದೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಪಕ್ಷದ ಹಿತದೃಷ್ಟಿಯಿಂದ ಅವರು ನಮ್ಮ ಕೈ ಜೋಡಿಸಬೇಕು. ಇನ್ನೂ ಕಾಲ ಮಿಂಚಿಲ್ಲ. ಸಮಸ್ಯೆಗಳಿದ್ದರೆ ದೆಹಲಿ ನಾಯಕರೊಂದಿಗೆ ಮಾತನಾಡಬಹುದು. ನಾವಂತೂ ಅವರೊಂದಿಗೆ ಇರುತ್ತೇವೆ ಎಂದು ಹೇಳಿದರು.
ರಾಘವೇಂದ್ರ ಮಾಡಿರುವ ಅಭಿವೃದ್ಧಿಯನ್ನು ಜನ ಮಾತನಾಡುತ್ತಿದ್ದಾರೆ. ಈ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಅವರು ಗೆಲ್ಲುತ್ತಾರೆ ಎಂದು ತಿಳಿಸಿದರು.