ಬೆಂಗಳೂರು:ಲೋಕಸಭೆ ಚುನಾವಣೆ 2024ಕ್ಕೆ ಇಂದು 2ನೇ ಹಂತದ (ರಾಜ್ಯದಲ್ಲಿ ಮೊದಲ ಹಂತ) ಮತದಾನ ನಡೆಯಲಿದೆ. ಕರ್ನಾಟಕದ ದಕ್ಷಿಣ ಭಾಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹರಡಿರುವ 14 ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಾಗು ಕಾಂಗ್ರೆಸ್ ಪಕ್ಷ ಪೈಪೋಟಿ ನಡೆಸುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಂಗಳೂರು ಉತ್ತರ, ತುಮಕೂರು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಗೋಚರಿಸಿದೆ.
ರಾಜ್ಯದದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳಿವೆ. ಈ ಪೈಕಿ ಮೊದಲ ಹಂತದಲ್ಲಿ ಒಟ್ಟು 247 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರಲ್ಲಿ 226 ಪುರುಷ ಅಭ್ಯರ್ಥಿಗಳಿದ್ದರೆ, 21 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು 30,577 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಎಲ್ಲ 14 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೈತ್ರಿ ಪಕ್ಷಗಳಾದ ಬಿಜೆಪಿ 11, ಜೆಡಿಎಸ್ 3 (ಮಂಡ್ಯ, ಕೋಲಾರ, ಹಾಸನ) ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುತ್ತಿದೆ.
ಎಲ್ಲೆಲ್ಲಿ ಮತದಾನ?:ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಜಿದ್ದಾಜಿದ್ದಿನ ಕಣಗಳು ಯಾವುವು?:ಹಳೆ ಮೈಸೂರು ಭಾಗದ ಪ್ರಮುಖ ಕ್ಷೇತ್ರವಾದ ಮಂಡ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದಾಗಿ ಗಮನ ಸೆಳೆದಿದೆ. ಕಾಂಗ್ರೆಸ್ನ ಸ್ಟಾರ್ ಚಂದ್ರು ಹೆಚ್ಡಿಕೆಗೆ ಸವಾಲೊಡ್ಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಹಾಲಿ ಸಂಸದರಾಗಿದ್ದು, ಅವರ ವಿರುದ್ಧ ಬಿಜೆಪಿಯಿಂದ ಜಯದೇವ ಹೃದ್ರೋಗಾಲಯದ ಮಾಜಿ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಲಾಗಿದೆ. ಭಾರೀ ಪೈಪೋಟಿ ಇರುವ ರಾಜ್ಯದ ಪ್ರಮುಖ ಕ್ಷೇತ್ರ ಇದಾಗಿದೆ.
ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲು ಬಿಜೆಪಿಯಿಂದ ರಾಜವಂಶಸ್ಥ ಯದುವೀರ್ ಒಡೆಯರ್ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಕೆ.ಎಂ.ಲಕ್ಷ್ಮಣ್ ಸ್ಪರ್ಧಿಸುತ್ತಿದ್ದಾರೆ. ಇವರು ಸಿದ್ದರಾಮಯ್ಯ ಆಪ್ತರಾಗಿದ್ದು ಸ್ವಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಿಎಂ ವಿಶೇಷ ಕಾಳಜಿ ವಹಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಜಿ ಆರೋಗ್ಯ ಮಂತ್ರಿ ಡಾ.ಕೆ.ಸುಧಾಕರ್ ಮತ್ತು ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ನಡುವೆ ಭಾರೀ ಸೆಣಸಾಟವಿದೆ.