ಬೆಳಗಾವಿ: ಬೆಳಗಾವಿಗೂ ಕುಟುಂಬ ರಾಜಕಾರಣಕ್ಕೂ ದಶಕಗಳ ನಂಟಿದೆ. ತಂದೆ ನಂತರ ಮಗ, ಮೊಮ್ಮಗ ಎಂಎಲ್ಎ, ಎಂಪಿ ಆಗಿ ಆಡಳಿತ ನಡೆಸಿದ್ದಾರೆ. ಅಲ್ಲದೇ ಏಕಕಾಲಕ್ಕೆ ಅಣ್ಣ-ತಮ್ಮ, ಅಕ್ಕ-ತಮ್ಮ, ಅಪ್ಪ-ಮಗ ಕೂಡ ಅಧಿಕಾರದಲ್ಲಿದ್ದಾರೆ. ಈಗ ಲೋಕಸಭೆ ಚುನಾವಣೆಯಲ್ಲೂ ಕುಟುಂಬ ರಾಜಕಾರಣವೇ ಮತ್ತೆ ಪ್ರಾಬಲ್ಯ ಮೆರೆಯುವ ಸಾಧ್ಯತೆ ದಟ್ಟವಾಗಿದೆ. ಫ್ಯಾಮಿಲಿ ಪೊಲಿಟಿಕ್ಸ್ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಹೌದು, ಕುಂದಾನರಿ ಬೆಳಗಾವಿ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವಷ್ಟು ಪ್ರಭಾವ ಹೊಂದಿದೆ. ಯಾವ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂಬುದನ್ನು ನಿರ್ಧರಿಸುವುದೇ ಇಲ್ಲಿನ ಘಟಾನುಘಟಿ ನಾಯಕರು. ಅಲ್ಲದೇ ಇಲ್ಲಿಯ ಕುಟುಂಬ ಮತ್ತು ಹೊಂದಾಣಿಕೆ ರಾಜಕಾರಣ ಅನೇಕ ಬಾರಿ ರಾಷ್ಟ್ರ, ರಾಜ್ಯ ನಾಯಕರ ನಿದ್ದೆಗೆಡಿಸಿರೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೌಜಲಗಿ, ಕತ್ತಿ, ಜಾರಕಿಹೊಳಿ, ಹುಕ್ಕೇರಿ, ಅಂಗಡಿ, ಜೊಲ್ಲೆ, ಹೆಬ್ಬಾಳ್ಕರ್, ಪಟ್ಟಣ, ಮಾಮನಿ ಸೇರಿ ಇನ್ನೂ ಹಲವು ರಾಜಕೀಯ ಕುಟುಂಬಗಳು ಸತತವಾಗಿ ಜಿಲ್ಲೆಯಲ್ಲಿ ಪ್ರಾಬಲ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ನಾಲ್ವರು ಜಾರಕಿಹೊಳಿ ಬ್ರದರ್ಸ್ ಅಧಿಕಾರದಲ್ಲಿ:ಜಾರಕಿಹೊಳಿ ಬ್ರದರ್ಸ್ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಈ ಕುಟುಂಬದ ಸತೀಶ ಜಾರಕಿಹೊಳಿ ಸದ್ಯ ಲೋಕೋಪಯೋಗಿ ಇಲಾಖೆ ಜೊತೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಇನ್ನು, ಹಿರಿಯ ಸಹೋದರ ರಮೇಶ ಜಾರಕಿಹೊಳಿ ಗೋಕಾಕ್ ಶಾಸಕ. ಮತ್ತೋರ್ವ ಸಹೋದರ ಬಾಲಚಂದ್ರ ಅರಭಾವಿ ಶಾಸಕರಾಗಿದ್ದಾರೆ. ಇನ್ನೋರ್ವ ಸಹೋದರ ಲಖನ್ ವಿಧಾನಪರಿಷತ್ ಸದಸ್ಯ. ಹೀಗೆ ಐವರು ಸಹೋದರರ ಪೈಕಿ ನಾಲ್ವರು ಅಧಿಕಾರದಲ್ಲಿದ್ದಾರೆ. ಇನ್ನು ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕುಟುಂಬದ ಒಬ್ಬರು ಮಂತ್ರಿ ಆಗಿರುತ್ತಾರೆ. ಈಗ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸತೀಶ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸೋದು ಬಹುತೇಕ ಫಿಕ್ಸ್ ಆಗಿದೆ.
ಹೆಬ್ಬಾಳ್ಕರ್ ಕುಟುಂಬವೂ ಹೊರತಾಗಿಲ್ಲ:ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ಕೂಡ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಈಗಾಗಲೇ ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನಪರಿಷತ್ ಸದಸ್ಯರಾಗಿದ್ದು, ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಲೋಕಸಭೆಯಿಂದ ಸ್ಪರ್ಧಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ.
ತಂದೆ ಎಂಎಲ್ಸಿ-ಮಗ ಎಂಎಲ್ಎ:ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಈಗ ವಿಧಾನಪರಿಷತ್ ಸದಸ್ಯರಾಗಿದ್ರೆ, ಪುತ್ರ ಗಣೇಶ ಮೂರನೇ ಅವಧಿಗೆ ಚಿಕ್ಕೋಡಿ ಶಾಸಕರಾಗಿದ್ದಾರೆ. ಹೀಗೆ ಅಪ್ಪ-ಮಗ ವಿಧಾನಸಭೆ ಮತ್ತು ವಿಧಾನಪರಿಷತ್ ಅನ್ನು ಏಕಕಾಲಕ್ಕೆ ಪ್ರವೇಶ ಮಾಡಿದ್ದು, ಹುಕ್ಕೇರಿ ಕುಟುಂಬದ ರಾಜಕಾರಣವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.
ಪತಿ ಅಕಾಲಿಕ ಅಗಲಿಕೆ, ಪತ್ನಿ ಎಂಪಿ:ದಿ. ಸುರೇಶ ಅಂಗಡಿ ಅಕಾಲಿಕ ನಿಧನದ ಬಳಿಕ ತೆರವಾದ ಬೆಳಗಾವಿ ಲೋಕಸಭೆ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಮಂಗಳಾ ಅಂಗಡಿ ಗೆದ್ದು ಬೀಗಿದ್ದರು. ಈ ಮೂಲಕ ಅಂಗಡಿ ಕುಟುಂಬದ ಎರಡೂವರೇ ದಶಕಗಳ ರಾಜಕೀಯ ಪಾರುಪತ್ಯ ಮುಂದುವರಿದಿತ್ತು. ಈಗ ಮತ್ತೊಮ್ಮೆ ಮಂಗಳಾ ಅಂಗಡಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಅಂಗಡಿ ಕುಟುಂಬ ಬಿಟ್ಟು ಅವರ ಬೀಗರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಬೆಳಗಾವಿ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಅಲ್ಲದೇ ದಿ. ಸುರೇಶ ಅಂಗಡಿ ಪುತ್ರಿ, ಶೆಟ್ಟರ್ ಸೊಸೆ ಶ್ರದ್ಧಾ ಕೂಡ ಟಿಕೆಟ್ ರೇಸ್ನಲ್ಲಿದ್ದಾರೆ.
ಕತ್ತಿ ಮೂರನೇ ಕುಡಿ ನಿಖಿಲ್:ತಂದೆ ವಿಶ್ವನಾಥ ಕತ್ತಿ ಅಕಾಲಿಕ ನಿಧನ ಹೊಂದಿದ ಬಳಿಕ ಹುಕ್ಕೇರಿಯಿಂದ ಉಮೇಶ ಕತ್ತಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದೇ ರೀತಿ ಉಮೇಶ ಕತ್ತಿ ಅಕಾಲಿಕ ಅಗಲಿಕೆ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಪುತ್ರ ನಿಖಿಲ್ ಗೆದ್ದಿದ್ದರು. ಇದರಿಂದ ಕತ್ತಿ ಕುಟುಂಬದ ಮೂರನೇ ತಲೆಮಾರು ರಾಜಕೀಯ ರಂಗ ಪ್ರವೇಶ ಮಾಡಿದಂತೆ ಆಗಿತ್ತು. ನಿಖಿಲ್ ಚಿಕ್ಕಪ್ಪ ರಮೇಶ ಕತ್ತಿ 2009ರಲ್ಲಿ ಒಂದು ಅವಧಿಗೆ ಸಂಸದರಾಗಿದ್ದರು. ಈಗ ಮತ್ತೆ ಸ್ಪರ್ಧಿಸಲು ಉತ್ಸುಕರಾಗಿದ್ದ ರಮೇಶ ಕತ್ತಿ ಅವರಿಗೆ ಚಿಕ್ಕೋಡಿ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಅವರು ಬೆಳಗಾವಿ ಟಿಕೆಟ್ ಕೇಳಿದ್ದಾರೆ. ಇನ್ನು ರಮೇಶ್ ಕತ್ತಿ ಪುತ್ರರಾದ ಪವನ್ ಮತ್ತು ಪೃಥ್ವಿ ಕೂಡ ಜಿ.ಪಂ. ಸದಸ್ಯರಾಗಿದ್ದರು.