ಮತ ಎಣಿಕೆಗೆ ಸಕಲ ಸಿದ್ಧತೆ (ETV Bharat) ಬೆಂಗಳೂರು:''ಲೋಕಸಭಾ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜೂನ್ 4ರಂದು ಬೆಳಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ'' ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಇಂದು ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ನಗರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ 3 ಲೋಕಸಭಾ ಕ್ಷೇತ್ರಗಳಿವೆ. ಬಿಬಿಎಂಪಿ ವ್ಯಾಪ್ತಿಗೊಳಪಡುವ 3 ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬರಲಿವೆ'' ಎಂದರು.
ಮತ ಎಣಿಕೆಗೆ ಸಕಲ ಸಿದ್ಧತೆ (ETV Bharat) ''ಮತ ಎಣಿಕೆಯ ಸಿಬ್ಬಂದಿ 3 ವಿಧದಲ್ಲಿದ್ದು, ಪ್ರತೀ ಟೇಬಲ್ಗೆ ಮೈಕ್ರೋ ಅಬ್ಸರ್ವರ್, ಎಣಿಕೆ ಮೇಲ್ವಿಚಾರಕರು ಮತ್ತು ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಎಣಿಕೆ ಏಜೆಂಟ್ಗಳನ್ನು ಬೆಳಗ್ಗೆ 6 ಗಂಟೆಗೆ ಬರುವಂತೆ ತಿಳಿಸಲಾಗಿದೆ. ಯಾರಿಗೆ ಗುರುತಿನ ಚೀಟಿ ನೀಡಲಾಗಿದೆಯೋ ಅಂಥವರಿಗೆ ಮಾತ್ರ ಎಣಿಕೆ ಕೇಂದ್ರದೊಳಗೆ ಪ್ರವೇಶವಿರಲಿದೆ. ಒಂದು ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಹಾಕಲು ಅವಕಾಶವಿದೆ. ದೊಡ್ಡ ಕೊಠಡಿಗಳಿದ್ದರೆ ಹೆಚ್ಚಿನ ಟೇಬಲ್‌ಗಳನ್ನು ಹಾಕಲಾಗುತ್ತದೆ'' ಎಂದು ಹೇಳಿದರು.
''ಅಂಚೆ ಮತದಾನ ಈ ಬಾರಿ ಹೆಚ್ಚಾಗಿ ನಡೆದಿರುವುದರಿಂದ ಎಣಿಕೆ ನಿರಂತರವಾಗಿ ನಡೆಯುತ್ತಿರುತ್ತದೆ. ಕೊನೆಯ ರೌಂಡ್‌ಗೆ ಮುಂಚಿತವಾಗಿ ಅಂಚೆ ಮತದಾನದ ಎಣಿಕೆಯನ್ನು ಮುಗಿಸಲಾಗುತ್ತದೆ. ಈ ಬಾರಿ ಪ್ರತಿ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಇನ್ನಿತರ ಕಡೆ ಸಿಸಿಟಿವಿ ಕ್ಯಾಮೆರಾ ಹಾಗೂ ವಿಡಿಯೋಗ್ರಫಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ'' ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ (ETV Bharat) ''ಎಣಿಕೆ ಕೇಂದ್ರದಲ್ಲಿ ವೀಕ್ಷಕರಿಗಾಗಿ ಒಂದು ಕೊಠಡಿ, ಚುನಾವಣಾಧಿಕಾರಿಗಾಗಿ ಒಂದು ಕೊಠಡಿ ಹಾಗೂ ಮಾಧ್ಯಮದವರಿಗಾಗಿ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದಲ್ಲಿ ಮಾತ್ರ ಮೊಬೈಲ್ ಬಳಸಲು ಅವಕಾಶವಿರುತ್ತದೆ. ಹೊರಗಡೆ ಮೊಬೈಲ್ ಬಳಸಲು ಅವಕಾಶವಿರುವುದಿಲ್ಲ'' ಎಂದರು.
''ಎಣಿಕೆ ಕಾರ್ಯದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸಿಬ್ಬಂದಿ ಎಣಿಕೆ ಕೇಂದ್ರದಲ್ಲಿ ಮೊಬೈಲ್/ ಬ್ಯಾಗ್ ತರುವ ಹಾಗಿಲ್ಲ. ಏಜೆಂಟ್ಗಳು ಕೂಡ ತರಲು ಅವಕಾಶವಿಲ್ಲ. ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿರುವ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರುವವರೆಗೆ ಯಾವ ಟೇಬಲ್ನಲ್ಲಿ ಕೂರಲಿದ್ದೇವೆ ಎಂಬುದು ತಿಳಿದಿರುವುದಿಲ್ಲ. ಜೂನ್ 4ರ ಬೆಳಗ್ಗೆ ಬಂದ ಬಳಿಕ ತಿಳಿಯಲಿದೆ. ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ಗಳ ಎಣಿಕೆ ಪ್ರಾರಂಭವಾದ ಬಳಿಕ ಇವಿಎಂ ಎಣಿಕೆ ಆರಂಭವಾಗಲಿದೆ'' ಎಂದು ಹೇಳಿದರು.
ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ (ETV Bharat) ಚುನಾವಣಾಧಿಕಾರಿಗಳಾದ ಡಾ.ಕೆ.ಹರೀಶ್ ಕುಮಾರ್, ದಯಾನಂದ್, ವಿನೋತ್ ಪ್ರಿಯಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು ನಗರ ಜಿಲ್ಲೆ- 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ, ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ:
1. ಬೆಂಗಳೂರು ಕೇಂದ್ರ: ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.
- ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
- ಮತಗಟ್ಟೆಗಳ ಸಂಖ್ಯೆ: 2125
- ಮತ ಎಣಿಕೆ ಕೊಠಡಿಗಳ ಸಂಖ್ಯೆ: 10
- ಒಟ್ಟು ಟೇಬಲ್ ಗಳ ಸಂಖ್ಯೆ: 135
- ಒಟ್ಟು ಸಿಬ್ಬಂದಿಯ ಸಂಖ್ಯೆ: 416
2. ಬೆಂಗಳೂರು ಉತ್ತರ:ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.
- ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
- ಮತಗಟ್ಟೆಗಳ ಸಂಖ್ಯೆ: 2911
- ಮತ ಎಣಿಕೆ ಕೊಠಡಿಗಳ ಸಂಖ್ಯೆ: 19
- ಒಟ್ಟು ಟೇಬಲ್ ಗಳ ಸಂಖ್ಯೆ: 130
- ಒಟ್ಟು ಸಿಬ್ಬಂದಿಯ ಸಂಖ್ಯೆ: 390
3. ಬೆಂಗಳೂರು ದಕ್ಷಿಣ: ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.
- ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
- ಮತಗಟ್ಟೆಗಳ ಸಂಖ್ಯೆ: 2120
- ಮತ ಎಣಿಕೆ ಕೊಠಡಿಗಳ ಸಂಖ್ಯೆ: 9
- ಒಟ್ಟು ಟೇಬಲ್ ಗಳ ಸಂಖ್ಯೆ: 118
- ಒಟ್ಟು ಸಿಬ್ಬಂದಿಯ ಸಂಖ್ಯೆ: 354
ಇದನ್ನೂ ಓದಿ:ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ - PM Modi Meeting