ಕರ್ನಾಟಕ

karnataka

ETV Bharat / state

ದಿವಾಳಿ ಪ್ರಕ್ರಿಯೆಯಲ್ಲಿ ವಶಪಡಿಸಿಕೊಂಡ ಸಾಲ ಪತ್ರಗಳ ವಿವರ ಕೇಳಿ ಹೈಕೋರ್ಟ್ ಮೊರೆಹೋದ ವಿಜಯ್ ಮಲ್ಯ - VIJAY MALLYA LOAN ISSUE

ಸಾಲ ಪ್ರಕರಣದಲ್ಲಿ ದೇಶ ತೊರೆದು ವಿದೇಶದಲ್ಲಿ ವಾಸಿಸುತ್ತಿರುವ ವಿಜಯ್​ ಮಲ್ಯ, ಹೈಕೋರ್ಟ್​ ಮೊರೆ ಹೋಗಿದ್ದಾರೆ. ಈ ಸಂಬಂಧ ಬ್ಯಾಂಕುಗಳಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ನೋಟಿಸ್​ ಜಾರಿ ಮಾಡಿದೆ.

VIJAY MALLYA LOAN ISSUE
ವಿಜಯ್​ ಮಲ್ಯ ಹೈಕೋರ್ಟ್​ ಮೊರೆ (ETV Bharat)

By ETV Bharat Karnataka Team

Published : Feb 5, 2025, 6:20 PM IST

ಬೆಂಗಳೂರು : ತನ್ನ ಮಾಲೀಕತ್ವದ ಕಿಂಗ್ ಫಿಷರ್ ಏರ್‌ಲೈನ್ಸ್ ಹಾಗೂ ಅದರ ಯುನೈಟೆಡ್ ಬ್ರೂವರೀಸ್‌ನ ದಿವಾಳಿ ಪ್ರಕ್ರಿಯೆಯಲ್ಲಿ ಬ್ಯಾಂಕುಗಳು ವಸೂಲಿ ಮಾಡಿರುವ ಹಣಕಾಸಿನ ಲೆಕ್ಕ ಪತ್ರಗಳನ್ನು ಒದಗಿಸುವಂತೆ ಕೋರಿ ಆರ್ಥಿಕ ಅಪರಾಧಿಯಾಗಿರುವ ಡಾ. ವಿಜಯ್‌ಮಲ್ಯ ಕೋರ್ಟ್​ ಮೊರೆ ಹೋಗಿದ್ದಾರೆ.

ತಮ್ಮ ಕಂಪೆನಿಗಳ ದಿವಾಳಿ ಪ್ರಕ್ರಿಯೆಯಲ್ಲಿ ಬ್ಯಾಂಕುಗಳು ವಸೂಲಿ ಮಾಡಿರುವ ಸಾಲದ ಮೊತ್ತ ಹಾಗೂ ಬಡ್ಡಿಯ ವಿವರಗಳ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿ ಮಲ್ಯ ಹಾಗೂ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ (ಯುಬಿಹೆಚ್‌ಎಲ್) ನಿರ್ದೇಶಕ ದಲ್ಜಿತ್ ಮಹಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕುಗಳಿಗೆ ನೋಟಿಸ್ ಜಾರಿ ಮಾಡಿದೆ.

ಚೆನ್ನೈನ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಕೊ ಬ್ಯಾಂಕ್, ಜೆ ಎಂ ಫೈನಾನ್ಶಿಯಲ್ ಅಸೆಟ್ ರಿಕನಸ್ಟ್ರಕ್ಷನ್ ಕಂಪನಿ ಪ್ರೈ.ಲಿ., ಯುಬಿಹೆಚ್‌ಎಲ್‌ನ ಅಧಿಕೃತ ಲಿಕ್ವಿಡೇಟರ್‌ಗೆ ತುರ್ತು ನೋಟಿಸ್ ಜಾರಿ ಮಾಡಿದೆ. ನೋಟಿಸ್​ನಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಫೆ. 19ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜ್ಜನ್ ಪೂವಯ್ಯ, 2017ರ ಏಪ್ರಿಲ್ 10ರಂದು ಸಾಲ ವಸೂಲಾತಿ ನ್ಯಾಯಮಂಡಳಿ ಆದೇಶದಂತೆ ಕಿಂಗ್ ಫಿಷರ್ ಹಾಗೂ ಅದರ ಮಾತೃ ಸಂಸ್ಥೆ ಯುನೈಟೆಡ್ ಬ್ರೂವರೀಸ್‌ ಹೋಲ್ಡಿಂಗ್ ಸಂಸ್ಥೆ ದಿವಾಳಿ ಎಂಬುದಾಗಿ ಘೋಷಣೆ ಮಾಡಲಾಗಿದೆ. ಮುಂದುವರೆದ ಭಾಗವಾಗಿ ಸಂಸ್ಥೆಯು ಸಾಲ ಪಡೆದಿರುವ ಇತರೆ ಸಂಸ್ಥೆಗಳು ವಸೂಲಿ ಮಾಡಿರುವ ಬಡ್ಡಿಯನ್ನು ಒಳಗೊಂಡ ಹಣಕಾಸಿನ ವಿವರದ ಪಟ್ಟಿ ಹಾಗೂ ಇದಾಗಲೇ ಸಂಸ್ಥೆಯಿಂದ ವಶಪಡಿಸಿಕೊಂಡಿರುವ ಸ್ವತ್ತಿನ ಮಾಹಿತಿ ನೀಡಲು ಬ್ಯಾಂಕುಗಳಿಗೆ ಆದೇಶಿಸಬೇಕು ಎಂದು ಕೋರಿದರು.

ಅಲ್ಲದೆ, ದಿವಾಳಿ ಪ್ರಕ್ರಿಯೆ ಅಂತಿಮಗೊಂಡಿದೆ. ಪರ್ಯಾಯವಾಗಿ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ₹ 6,200 ಕೋಟಿ ಪಾವತಿಸಲು ಪ್ರಾಥಮಿಕ ಸಾಲಗಾರ ಸಂಸ್ಥೆ ಕಿಂಗ್‌ಫಿಷರ್‌ಗೆ ಆದೇಶಿಸಲಾಗಿತ್ತು. ಸಾಲ ವಸೂಲಾತಿ ಅಧಿಕಾರಿಯು 2007ರ ನಡುವೆ ₹6,200 ಕೋಟಿ ಹಾಗೂ 10,200 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. ಅಲ್ಲದೆ, ಸಂಸತ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 14,000 ಕೋಟಿ ವಸೂಲಿ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಕಂಪನಿ ಕಾಯ್ದೆಯ ಅನ್ವಯ ಸಾಲವನ್ನು ಸಂಪೂರ್ಣವಾಗಿ ಪಾವತಿಸಿದರೆ ಮಾತೃ ಸಂಸ್ಥೆಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಆಗ ನಾವು ಕಂಪೆನಿಯ ಪುನಶ್ಚೇತನಕ್ಕೆ ಅರ್ಜಿ ಸಲ್ಲಿಸಬಹುದು. ಇದು ಸಾಲವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಸಾಲ ವಸೂಲಾತಿ ಅಧಿಕಾರಿಯು ಸರ್ಟಿಫಿಕೇಟ್ ನೀಡಿದ ಮೇಲೆ ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಹಣ, ವಸೂಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಪ್ರಾಥಮಿಕ ಸಾಲವನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಆದೇಶ ಮಾಡಲಾಗಿಲ್ಲ. ಈ ವಸೂಲಿ ಪ್ರಕ್ರಿಯೆಯನ್ನು ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಇದನ್ನೂ ಓದಿ:ವಿಜಯ್ ಮಲ್ಯ, ಕ್ಯಾಪ್ಟನ್ ಗೋಪಿನಾಥ್ ವಿರುದ್ಧ ಎಸ್‌ಎಫ್‌ಐಒ ತನಿಖೆ ರದ್ದುಗೊಳಿಸಿದ ಹೈಕೋರ್ಟ್ - High Court

ABOUT THE AUTHOR

...view details