ಮೈಸೂರು:ನಗರದ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಸಮಯದಲ್ಲಿ ಅತಿಥಿ ಗೃಹದಲ್ಲಿ ನಾಪತ್ತೆಯಾಗಿದ್ದ ಸಾಮಗ್ರಿಗಳ ಪ್ರಕರಣ ಸಂಬಂಧ ರೋಹಿಣಿ ಸಿಂಧೂರಿ ವೇತನದಲ್ಲಿ ಕಡಿತಗೊಳಿಸಿ ಆ ಹಣವನ್ನು ನಮಗೆ ನೀಡುವಂತೆ ಮೈಸೂರು ನಗರದ ಆಡಳಿತ ತರಬೇತಿ ಸಂಸ್ಥೆಯು ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದೆ.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಪ್ರಾರಂಭದ ದಿನಗಳಲ್ಲಿ ನಗರದ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ಅತಿಥಿ ಗೃಹದ ಬೆಲೆ ಬಾಳುವ ಸುಮಾರು ₹77,296 ಮೌಲ್ಯದ ಕೆಲವು ವಸ್ತುಗಳು ನಾಪತ್ತೆಯಾಗಿದ್ದವು. ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಮತ್ತೆ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕರು ಸರ್ಕಾರಕ್ಕೆ ನಾಪತ್ತೆಯಾದ ಅತಿಥಿ ಗೃಹದ ಸಾಮಗ್ರಿಗಳ ಒಟ್ಟು ಮೌಲ್ಯ ₹77,296 ಮೊತ್ತವನ್ನು ರೋಹಿಣಿ ಸಿಂಧೂರಿ ವೇತನದಲ್ಲಿ ಕಡಿತಗೊಳಿಸಿ ಆ ಹಣವನ್ನು ಡಿಡಿ ಮೂಲಕ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕರಿಗೆ ಕಳುಹಿಸುವಂತೆ ಸರ್ಕಾರದ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಪ್ರಕರಣ ಹಿನ್ನೆಲೆ ಏನು?:ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದ್ ಮೇಲೆ ಮೊದಲು 2020ರ ಅಕ್ಟೋಬರ್ 2ರಿಂದ ನವೆಂಬರ್ 14ವರೆಗೆ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಅತಿಥಿ ಗೃಹದಲ್ಲಿ ವಾಸವಾಗಿದ್ದರು. ರೋಹಿಣಿ ಸಿಂಧೂರಿ ಅಲ್ಲಿಂದ ಜಿಲ್ಲಾಧಿಕಾರಿಗಳ ಅಧಿಕೃತ ಅತಿಥಿ ಗೃಹಕ್ಕೆ ವಾಸ್ತವ್ಯ ಬದಲಾಯಿಸುವ ಸಂದರ್ಭದಲ್ಲಿ ಅತಿಥಿ ಗೃಹದ ಬೆಲೆ ಬಾಳುವ ಕೆಲವು ವಸ್ತುಗಳು ನಾಪತ್ತೆಯಾಗಿದ್ದು, ಈ ಬಗ್ಗೆ 2020ರ ಡಿಸೆಂಬರ್ 6, 2021ರ ಜನವರಿ 8 ಹಾಗೂ 2021ರ ಏಪ್ರಿಲ್ 12ರಂದು ಆಡಳಿತ ತರಬೇತಿ ಸಂಸ್ಥೆಯಿಂದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರಿಗೆ ಸಾಮಗ್ರಿಗಳನ್ನು ಹಿಂದಿರುಗಿಸುವಂತೆ ಪತ್ರ ಬರೆಯಲಾಗಿತ್ತು.