ಬೆಳಗಾವಿ/ಮೈಸೂರು: ಮುಡಾ ಪ್ರಕರಣ ಸಿಬಿಐಗೆ ವಹಿಸುವಂತೆ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯುವಂತೆ ತಮಗೆ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಇಂದು ಮತ್ತೊಂದು ದೂರು ಸಲ್ಲಿಸಿದ್ದಾರೆ.
ಹಣ ಆಮಿಷದ ಬಗ್ಗೆ ಸ್ನೇಹಮಯಿ ಕೃಷ್ಣ ಹೇಳಿದ್ದೇನು?:ಕಳೆದ 13ನೇ ದಿನಾಂಕದಂದು ನನ್ನ ಬಳಿ ಮೈಸೂರಿನ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ಈ ಕೇಸ್ನಲ್ಲಿ ಪಾರ್ವತಿ ಅವರ ಪಾತ್ರ ಏನೂ ಇಲ್ಲ. ಎಲ್ಲವನ್ನೂ ಮಲ್ಲಿಕಾರ್ಜುನ್ ಸ್ವಾಮಿ, ದೇವರಾಜ್, ಸಿಟಿ ಕುಮಾರ್ ಮಾಡಿದ್ದಾರೆ. ಸಿ.ಟಿ. ಕುಮಾರ್ ಹೇಳಿದ ಕಡೆ ಪಾರ್ವತಿ ಅವರು ಸಹಿ ಮಾಡಿದ್ದಾರೆ ಅಷ್ಟೇ. ಇದರಲ್ಲಿ ಅವರ ತಪ್ಪಿಲ್ಲ ಎಂದರು. ಪಾರ್ವತಿ ಅವರು ತುಂಬಾ ನೊಂದಿದ್ದಾರೆ. ಊಟ, ನಿದ್ರೆ ಮಾಡುತ್ತಿಲ್ಲ. ದಯಮಾಡಿ ಸಹಕಾರ ನೀಡಿ ನಿಮಗೆ ಎಷ್ಟು ಕೋಟಿ ಬೇಕಾದ್ರೂ ಕೊಡುತ್ತೇವೆ ಎಂದು ಆಮಿಷ ನೀಡಿದ್ದರು. ನಾನು ಹೋರಾಟ ನಿಲ್ಲಿಸಲ್ಲ, ದಯವಿಟ್ಟು ಹೋಗಿ ಎಂದು ಹೇಳಿದ್ದೆ. ಬಳಿಕ 15ನೇ ತಾರೀಖಿನಂದು ಮತ್ತೆ ಈ ವ್ಯಕ್ತಿ ನನ್ನ ಮನೆ ಬಳಿ ಬಂದು, ನನ್ನ ಮಗನ ಬಳಿ ಇದೆ ವಿಚಾರ ಹೇಳಿದ್ದಾರೆ. ಇದೆಲ್ಲವೂ ನಮ್ಮ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಬಗ್ಗೆ ತಿಳಿದ ತಕ್ಷಣ ನಾನು ನಿನ್ನೆ ಇಡಿಗೆ ದೂರು ನೀಡಿದ್ದೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಮುಡಾ ಹಗರಣಗಳನ್ನು ಹೊರತರುವಲ್ಲಿ ಸತತ ಹೋರಾಟ ನಡೆಸಿರುವ ದೂರುದಾರ ಸ್ನೇಹಮಯಿ ಕೃಷ್ಣ ಯಾರ ಆಮಿಷಕ್ಕೂ ಬಲಿಯಾಗಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.