ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವವನ್ನು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆ ವಿಧಾನ ಪರಿಷತ್ ಅಂಗೀಕಾರ ನೀಡಿತು. ಉತ್ತರದ ನಡುವಿನ ಪ್ರಶ್ನೆಗಳಿಗೆ ಉತ್ತರಿಸಲು ಸಿಎಂ ನಿರಾಕರಣೆ ಖಂಡಿಸಿ ಪ್ರತಿಪಕ್ಷಗಳ ಸಭಾತ್ಯಾಗದೊಂದಿಗೆ ಪ್ರಸ್ತಾವವನ್ನು ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ, ಪ್ರತಿಪಕ್ಷದ ನಾಯಕರು ಎರಡು ಮೂರು ಬಾರಿ ಎದ್ದರೆ ಸರಿ, ಪ್ರತಿ ವಾಕ್ಯಕ್ಕೂ ಎದ್ದರೆ ಹೇಗೆ? ಸರ್ಕಾರ ಇರುವುದೇ ಪ್ರತಿ ಪಕ್ಷಗಳ ಪ್ರಶ್ನೆಗೆ ಉತ್ತರ ನೀಡಲು, ಯಾವುದೇ ಪ್ರಶ್ನೆ ಕೇಳಿ ಉತ್ತರ ಹೇಳುತ್ತೇನೆ. ಆದರೆ ನಾನು ಉತ್ತರ ಕೊಡಬಾರದು ಎನ್ನುವ ಕಾರಣಕ್ಕಾಗಿ ಪದೇ ಪದೇ ಅಡ್ಡಿಪಡಿಸಲಾಗುತ್ತಿದೆ ಎಂದು ಸಿಎಂ ಅಸಮಾಧಾನ ಹೊರಹಾಕಿದರು.
ನಾನು ಪ್ರಧಾನಿ ಮತ್ತು ಕೇಂದ್ರ ಸರ್ಕಾರವನ್ನು ಟೀಕೆ ಮಾಡಲ್ಲ, ಆಗಿರುವ ಅನ್ಯಾಯವನ್ನು ಹೇಳಿದ್ದೇನೆ ಅಷ್ಟೇ. 15ನೇ ಮಧ್ಯಂತರ ವರದಿಯ ಅನುದಾನ ಶಿಫಾರಸು ಅಂತಿಮ ವರದಿಯಲ್ಲಿ ಇಲ್ಲದಂತೆ ಮಾಡಿದ್ದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಪ್ರಕಟಿಸಿ ವರ್ಷವಾದರೂ ಒಂದು ರೂ.ಕೊಟ್ಟಿಲ್ಲ, ಬೊಮ್ಮಾಯಿ ಬಜೆಟ್ನಲ್ಲಿ ಇದನ್ನು ಪ್ರಸ್ತಾಪಿಸಿ ಕೇಂದ್ರಕ್ಕೆ ಧನ್ಯವಾದ ಸಲ್ಲಿಸಿದ್ದರು ಎಂದರು.
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಿರ್ಮಲಾ ಸೀತಾರಾಮನ್ ಏನು ಹೇಳಿದ್ದರು ಎನ್ನುವುದನ್ನೂ ಹೇಳಿ ಎಂದು ಕೋಟ ಶ್ರೀನಿವಾಸ ಪೂಜಾರಿ, ರವಿಕುಮಾರ್ ಆಗ್ರಹಿಸಿದರು. ಒನ್ ಸೈಡ್ ಭಾಷಣ ಆಗಬಾರದು, ಸೂಕ್ತ ಪ್ರಸ್ತಾವನೆ ಸಲ್ಲಿಸದೇ ಇರುವುದು ಹಾಗು ಅಗತ್ಯ ಅನುದಾನ ಇಡದೇ ಇರುವ ಕಾರಣ ಅನುದಾನ ಬಿಡುಗಡೆ ಆಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ವೇಳೆ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪಾಯಿಂಟ್ ಆಫ್ ಆರ್ಡರ್ ಎತ್ತಿದರು. ಬರ, ನೆರೆ, ಕುಡಿಯುವ ನೀರು, ನೀತಿಗಳು ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ, ನಮ್ಮ ಪ್ರಸ್ತಾಪಗಳಿಗೆ ವಿವರಣೆ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ರಾಜ್ಯಕ್ಕೆ ಆಗಿರುವ ಅನ್ಯಾಯ ಕುರಿತು ರಾಜ್ಯಪಾಲರ ಭಾಷಣದಲ್ಲಿದೆ ಹೇಳುತ್ತಿದ್ದೇನೆ, ನಿಮ್ಮ ನಾಯಕತ್ವದಲ್ಲೇ ಕೇಂದ್ರಕ್ಕೆ ನಿಯೋಗ ಹೋಗೋಣ, ಪಿಎಂ ಹಾಗೂ ನಿರ್ಮಲಾ ಅವರ ಅಪಾಯಿಂಟ್ಮೆಂಟ್ ಕೊಡಿಸಿ. ಭದ್ರಾ ಮೇಲ್ದಂಡೆ ಸೇರಿ ಬಾಕಿ ಇರುವ ಅನುದಾನ ಕೇಳೋಣ ಎಂದರು.