ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಎರಡು ದಿನ ಸೊಪ್ಪು ಮೇಳ: 120 ವೈವಿಧ್ಯಮಯ ಸೊಪ್ಪುಗಳ ಪ್ರದರ್ಶನ - LEAVES MELA - LEAVES MELA

ಹಾವೇರಿಯ ಹೊಸಮಠದಲ್ಲಿ ಸಹಜ ಸಮೃದ್ಧಿ ಬಳಗ, ಸಾವಯವ ಕೃಷಿಕರ ಬಳಗ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸೊಪ್ಪು ಮೇಳ ಆಯೋಜಿಸಲಾಗಿದೆ.

soppu-mela
ಸೊಪ್ಪು ಮೇಳ (ETV Bharat)

By ETV Bharat Karnataka Team

Published : Oct 5, 2024, 10:30 PM IST

Updated : Oct 6, 2024, 8:19 AM IST

ಹಾವೇರಿ :ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ಮಹಾನಗರಗಳಿಗೆ ಮೀಸಲಾಗಿದ್ದ ಸೊಪ್ಪು ಮೇಳ ಏಲಕ್ಕಿನಗರಿ ಹಾವೇರಿ ನಗರದಲ್ಲಿ ಆರಂಭವಾಗಿದೆ. ಸಹಜ ಸಮೃದ್ಧಿ ಬಳಗ, ಸಾವಯವ ಕೃಷಿಕರ ಬಳಗ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸೊಪ್ಪು ಮೇಳ ಆಯೋಜಿಸಲಾಗಿದೆ.

ಹಾವೇರಿಯ ಹೊಸಮಠದಲ್ಲಿ ಆರಂಭವಾದ ಸೊಪ್ಪು ಮೇಳಕ್ಕೆ ಹೊಸಮಠದ ಶಾಂತಲಿಂಗಸ್ವಾಮೀಜಿ ಚಾಲನೆ ನೀಡಿದರು. ಎರಡು ದಿನಗಳ ಕಾಲ ನಡೆಯುವ ಸೊಪ್ಪು ಮೇಳದಲ್ಲಿ ಸೊಪ್ಪುಗಳ ಲೋಕವೇ ಅನಾವರಣಗೊಂಡಿದೆ.

ವೈವಿಧ್ಯಮಯ ಸೊಪ್ಪುಗಳ ಪ್ರದರ್ಶನ:ಸುಮಾರು 120 ಬಗೆಯ ಸೊಪ್ಪುಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕಾಡಲ್ಲಿ, ತೋಟದಲ್ಲಿ, ಜಮೀನಿನಲ್ಲಿ, ಬೆಟ್ಟದಲ್ಲಿ ಬೆಳೆಯುವಂತಹ ಸೊಪ್ಪುಗಳು ಇಲ್ಲಿ ಕಾಣಸಿಗುತ್ತವೆ. 50 ತರದ ಸೊಪ್ಪುಗಳ ಪ್ರದರ್ಶನದ ಜೊತೆಗೆ ಮಾರಾಟದ ವ್ಯವಸ್ಥೆ ಸಹ ಇದೆ.

ಸೊಪ್ಪು ಮೇಳದ ಆಯೋಜಕ ಶಾಂತಕುಮಾರ್ ಮಾತನಾಡಿದರು (ETV Bharat)

ಪ್ರತಿಸೊಪ್ಪಿನ ಮಾಹಿತಿಯನ್ನ ಸಹ ಅದರ ಜೊತೆಗೆ ನೀಡಲಾಗುತ್ತಿದೆ. ಮೇಳದಲ್ಲಿ ಎಂಟು ಜಿಲ್ಲೆಗಳ ರೈತರು ಪಾಲ್ಗೊಂಡಿದ್ದು, ರೈತರು ತಾವು ಬೆಳೆದ ಸೊಪ್ಪುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಜೊತೆಗೆ ಅದರ ಮಾಹಿತಿಯನ್ನು ಸಹ ನೀಡುತ್ತಿದ್ದಾರೆ.

ಸೊಪ್ಪುಗಳಲ್ಲದೆ ಸೊಪ್ಪುಗಳಿಂದ ಮಾಡುವ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನವನ್ನು ಈ ಮೇಳದಲ್ಲಿ ಏರ್ಪಡಿಸಲಾಗಿದೆ. ಒಂದು ಕಾಲದಲ್ಲಿ ಬಡವರಿಂದ ಹಿಡಿದು ಶ್ರೀಮಂತರ ಅಡುಗೆಮನೆಯ ಅವಿಭಾಜ್ಯ ಅಂಗವಾಗಿದ್ದ ಸೊಪ್ಪುಗಳು ಇದೀಗ ಮರೆಯಾಗುತ್ತಿವೆ.

ಸೊಪ್ಪುಗಳ ರಕ್ಷಣೆ ಅವಶ್ಯಕ : 'ಆಧುನಿಕ ಕೃಷಿ, ರಾಸಾಯನಿಕ ಕೃಷಿಯಿಂದ ಸೊಪ್ಪುಗಳ ತಳಿಗಳು ನಶಿಸುತ್ತಿವೆ. ಆಧುನೀಕರಣ, ನಗರೀಕರಣದ ಜೀವನದಿಂದ ಅಡುಗೆ ಮನೆಗಳೇ ಮಾಯವಾಗುತ್ತಿರುವ ಈ ದಿನಗಳಲ್ಲಿ ಸೊಪ್ಪುಗಳ ಕಡೆ ಗಮನಹರಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಇವುಗಳ ಸಂರಕ್ಷಣೆ ಇಂದಿನ ಜೀವನಕ್ಕೆ ಅತಿ ಅವಶ್ಯಕವಾಗಿದೆ. ಈ ಸೊಪ್ಪುಗಳು ಕಡುಬಡವರಿಂದ ಹಿಡಿದು ಶ್ರೀಮಂತರವರೆಗೆ ಪ್ರತಿನಿತ್ಯ ಅಡುಗೆಯಲ್ಲಿ ಬಳಕೆಯಾಗುತ್ತವೆ. ಆಹಾರ ಸೊಪ್ಪುಗಳಿರಬಹುದು, ಔಷಧಿಯ ಸೊಪ್ಪುಗಳಿರಬಹುದು, ಯಾವುದಾದರೂ ಒಂದು ಸೊಪ್ಪು ಬಳಕೆಯಾಗುತ್ತಿದೆ. ವೈವಿಧ್ಯಮಯ ಸೊಪ್ಪುಗಳು ಕೇವಲ ಗ್ರಾಮೀಣ ಭಾಗಕ್ಕೆ ಮಾತ್ರ ಸೀಮಿತವಾಗಿವೆ. ಈ ಸೊಪ್ಪುಗಳು ನಗರಕ್ಕೆ ಬರಬೇಕು, ಸೊಪ್ಪು ಬೆಳೆಯುವ ರೈತರಿಗೆ ಆದಾಯ ಸಿಗಬೇಕು, ನಗರದ ಗ್ರಾಹಕರಿಗೆ ರೈತರ ಸೊಪ್ಪು ಮಾರಾಟಕ್ಕೆ ಸಿಗಬೇಕು. ಈ ಉದ್ದೇಶದಿಂದ ಹಾವೇರಿಯಲ್ಲಿ ಸೊಪ್ಪು ಮೇಳ ಆಯೋಜಿಸಿದ್ದೇವೆ' ಎಂದು ಮೇಳದ ಸಂಘಟಕ ಶಾಂತಕುಮಾರ್ ತಿಳಿಸಿದರು.

ಸೊಪ್ಪಿನಿಂದ ಹೇರಳ ಪೋಷಕಾಂಶ : ಮೇಳದಲ್ಲಿ ಭಾಗವಹಿಸಿದ ಸೊಪ್ಪು ಬೆಳೆಗಾರ ನಾಗರಾಜ ಹುಲಗೂರು ಮಾತನಾಡಿ, 'ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿನ ಮೆಂತೆ. ಕೊತ್ತಂಬರಿ, ಹರವಿ, ತಿರಕಸಾಲಿ ಸೊಪ್ಪುಗಳ ಬಗ್ಗೆ ಜನ ತಿಳಿದುಕೊಂಡಿರುತ್ತಾರೆ. ಆದರೆ ಈ ರೀತಿಯ ಮೇಳಗಳು ವೈವಿಧ್ಯಮಯ ಸೊಪ್ಪುಗಳ ಪರಿಚಯವನ್ನ ಜನಸಾಮಾನ್ಯರಿಗೆ ಮಾಡಿಕೊಡುತ್ತವೆ. ನುಗ್ಗೆ ಸೊಪ್ಪು ಸೊಪ್ಪುಗಳ ರಾಜನಾಗಿದ್ದು, ಇದರಿಂದ ಹಲವು ಪೋಷಕಾಂಶಗಳು ಸಿಗುತ್ತವೆ. ನುಗ್ಗೆಸೊಪ್ಪಿನಿಂದ ಕಷಾಯ, ಪಲ್ಯ ಮತ್ತು ತಂಬೂಳಿ ಮಾಡಬಹುದು. ಸೊಪ್ಪಿನಿಂದ ಸಾಕಷ್ಟು ಪ್ರಯೋಜನಗಳಿವೆ' ಎಂದು ವಿವರಿಸಿದರು.

ಇದನ್ನೂ ಓದಿ :ದಸರಾ ಆಹಾರ ಮೇಳ: ಆದಿವಾಸಿ ಬಂಬೂ ಬಿರಿಯಾನಿ ತಯಾರಿ ಹೇಗೆ, ಇವರು ಬಳಸುವ ಪದಾರ್ಥಗಳೇನು ಗೊತ್ತಾ? - Tribles Bambu Biryani

Last Updated : Oct 6, 2024, 8:19 AM IST

ABOUT THE AUTHOR

...view details