ಕಾರವಾರ: ನೌಕಾನೆಲೆಯೊಳಗಿನ ಫೋಟೋ ಸೇರಿದಂತೆ ಇತರೆ ಗೌಪ್ಯ ಮಾಹಿತಿಗಳನ್ನು ವಿದೇಶಿ ಅಧಿಕಾರಿಗಳಿಗೆ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹೊರ ಗುತ್ತಿಗೆ ನೌಕರರು ಸೇರಿದಂತೆ ಮೂವರನ್ನು ರಾಷ್ಟ್ರದ್ರೋಹದ ಆರೋಪದಡಿ ಎನ್‌ಐಎ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.
ಕಾರವಾರ ತಾಲೂಕಿನ ತೋಡೂರಿನ ಓರ್ವ, ಮುದುಗಾದ ಅಂಕೋಲಾ ಹಳವಳ್ಳಿಯ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಈತನ ವಿಚಾರಣೆ ವೇಳೆ ಕಾರವಾರದ ನೌಕಾನೆಲೆಯಲ್ಲಿನ ಮಾಹಿತಿಗಳು ಸೋರಿಕೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ವೇಳೆ ಆತ ನೀಡಿದ ಮಾಹಿತಿ ಆಧಾರದ ಮೇಲೆ ಎನ್‌ಐಎನ ಓರ್ವ ಡಿವೈಎಸ್‌ಪಿ ಹಾಗೂ ಮೂವರು ಇನ್ಸ್ಪೆಕ್ಟರ್ಗಳನ್ನು ಒಳಗೊಂಡ ತಂಡ ವಶಕ್ಕೆ ಪಡೆಯಲಾದ ಮೂವರನ್ನು ವಿಚಾರಣೆ ನಡೆಸಿದೆ. ಅಲ್ಲದೆ ಅವರ ಬ್ಯಾಂಕ್ ದಾಖಲೆ, ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಸಹ ಜಪ್ತಿ ಮಾಡಲಾಗಿದೆ.
ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಇವರು ಹಣಕ್ಕಾಗಿ ಸೀಬರ್ಡ್ ನೌಕಾನೆಲೆಯ ಫೋಟೊ ಹಾಗೂ ಇತರ ಮಾಹಿತಿ ರವಾನಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರನ್ನು ಸೀಬರ್ಡ್ ಯೋಜನಾ ಪ್ರದೇಶದಲ್ಲಿಯೇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ನೌಕಾನೆಲೆಯಲ್ಲಿ ಕೆಲಸ ಬಿಟ್ಟು ಗೋವಾದಲ್ಲಿ ಹೊಟೇಲ್ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಅಲ್ಲಿಂದ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ಮಂಗಳೂರು: ಟ್ರೇಡಿಂಗ್ ಕಂಪನಿಯಲ್ಲಿ ಮಹಿಳಾ ಅಕೌಂಟೆಂಟ್ನಿಂದ ವಂಚನೆ ಆರೋಪ - Fraud Case