ಕರ್ನಾಟಕ

karnataka

ETV Bharat / state

ಬಿಜೆಪಿ - ಜೆಡಿಎಸ್​ನಲ್ಲಿ ಭವಿಷ್ಯವಿಲ್ಲವೆಂದು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್​ ಸೇರುತ್ತಿದ್ದಾರೆ: ಡಿ.ಕೆ.ಶಿವಕುಮಾರ್​ - D K SIVAKUMAR

ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜನರ ಮುಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ.

DCM D K Shivakumar
ಡಿಸಿಎಂ ಡಿ.ಕೆ.ಶಿವಕುಮಾರ್​ (ETV Bharat)

By ETV Bharat Karnataka Team

Published : Nov 1, 2024, 11:24 AM IST

Updated : Nov 1, 2024, 1:19 PM IST

ರಾಮನಗರ:"ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಆ ಪಕ್ಷದ ಮುಖಂಡರು, ಕಾರ್ಯಕರ್ತರು ಗುಂಪು ಗುಂಪಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಎಲ್ಲೋ ಹಳ್ಳಿಗಳಲ್ಲಿ ಭಿನ್ನಾಭಿಪ್ರಾಯದಿಂದ ಒಂದಿಬ್ಬರು ಮಾತ್ರ ನಮ್ಮ ಪಕ್ಷ ಬಿಟ್ಟಿರಬಹುದು. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನರಿಗೆ ಒಳ್ಳೆಯದಾಗಲು ಸಾಧ್ಯ ಎಂದು ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಚನ್ನಪಟ್ಟಣದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪಕ್ಷಕ್ಕೆ ಸೇರಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. "ಕುಮಾರಸ್ವಾಮಿ ಅವರಿಗೆ ತಮ್ಮ ಸ್ಥಾನವನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಬಿಜೆಪಿ ನಾಯಕರೇ ಕುಮಾರಸ್ವಾಮಿ ಅವರಿಗೆ ಉತ್ತರ ನೀಡುತ್ತಾರೆ. ಅವರ ಪಕ್ಷ ಗಟ್ಟಿಯಾಗಿ ಉಳಿಯುತ್ತದೆಯೋ ಇಲ್ಲವೋ ಎಂಬುದಕ್ಕೆ ಸಮಯ ಬಂದಾಗ ಉತ್ತರ ನೀಡುತ್ತೇನೆ. ಬಿಜೆಪಿಯಲ್ಲಿ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದೂ ಗೊತ್ತಿದೆ" ಎಂದರು.

ಡಿ.ಕೆ.ಶಿವಕುಮಾರ್​ ಸುದ್ದಿಗೋಷ್ಠಿ (ETV Bharat)

ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ:ಈ ಸರ್ಕಾರ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಕುಮಾರಸ್ವಾಮಿ ಮಾತಿಗೆ ಉತ್ತರ ನೀಡುವುದಿಲ್ಲ, ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ" ಎಂದು ತಿಳಿಸಿದರು. ಮೂರು ತಿಂಗಳ ಹಿಂದೆಯೇ ಕೆ.ಜೆ ಜಾರ್ಜ್ ಅವರು ಯೋಗೇಶ್ವರ್ ಅವರನ್ನು ಡೀಲ್ ಮಾಡಿದ್ದರು ಎಂಬ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಅದೆಲ್ಲವೂ ಸುಳ್ಳು. ಯಾವ ಡೀಲು ಇಲ್ಲ. ಇದಕ್ಕೆಲ್ಲ ಯೋಗೇಶ್ವರ್ ಉತ್ತರ ನೀಡುತ್ತಾರೆ" ಎಂದು ತಿಳಿಸಿದರು.

ನಾವು ಬದುಕಿನ ಮೇಲೆ ಮತ ಕೇಳುತ್ತೇವೆ:ಚನ್ನಪಟ್ಟಣದಲ್ಲಿ ಭಾವನಾತ್ಮಕವಾಗಿ ಮತ ಸೆಳೆಯಲಾಗುತ್ತಿದೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಭಾವನೆ ಮೇಲೆ ಮತ ಕೇಳುವುದಲ್ಲ. ಬದುಕಿನ ಮೇಲೆ ಮತ ಕೇಳಬೇಕು. ಅವರು ಭಾವನೆ ಮೇಲೆ ಮತ ಕೇಳಿದರೆ, ನಾವು ಬದುಕಿನ ಮೇಲೆ ಮತ ಕೇಳುತ್ತೇವೆ. ಜನರ ಬದುಕು, ಅವರ ಅಭಿವೃದ್ಧಿ ನಮಗೆ ಮುಖ್ಯ. ಕೆರೆಗೆ ನೀರು ತುಂಬಿಸುವುದು, ರಸ್ತೆ, ಮನೆಗಳು, ನಿವೇಶನ ನೀಡುವುದು ಮುಖ್ಯ" ಎಂದು ತಿಳಿಸಿದರು.

ಕನ್ನಡ ಬಾವುಟ ಹಾರಿಸಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಉತ್ತರಿಸಿ, "ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಕನ್ನಡ ಪರ ಸಂಘಟನೆಗಳು ತಮ್ಮ ಕಚೇರಿಯಲ್ಲಿ ಕನ್ನಡ ಧ್ವಜ ಹಾರಿಸಲಿ. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಭಾಗವಹಿಸುವಂತಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯವರೂ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ" ಎಂದು ತಿಳಿಸಿದರು.

ರಾಜ್ಯ ಸರ್ಕಾರ ಹಗರಣ ಮುಚ್ಚಿಹಾಕಲು ವಕ್ಫ್ ವಿಚಾರ ಮುಂದೆ ಬಿಟ್ಟಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, "ವಕ್ಫ್ ಮೂಲಕ ಮೊದಲು ನೋಟಿಸ್ ಕೊಟ್ಟಿದ್ದು ಬಿಜೆಪಿ. ಸಮುದಾಯಗಳ ನಡುವೆ ಕಲಹ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ" ಎಂದು ತಿಳಿಸಿದರು.

ಕಣ್ಣೀರಿಟ್ಟ ನಿಖಿಲ್​ ಕುಮಾರಸ್ವಾಮಿ (ETV Bharat)

ಕಣ್ಣೀರಿಟ್ಟ ನಿಖಿಲ್​ ಕುಮಾರಸ್ವಾಮಿ:ಬೊಂಬೆನಗರಿ ಚನ್ನಪಟ್ಟಣ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರಿದೆ. ಎರಡೂ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿವೆ. ಕಾರ್ಯಕರ್ತರ ಮುಂದೆ ಭಾಷಣದ ವೇಳೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.

"ಭಾರಿ ಷಡ್ಯಂತ್ರ ನಡೆಸಿ ಕಳೆದ ಮಂಡ್ಯ ಹಾಗೂ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮಗನಾಗಿ ಹುಟ್ಟಿದ್ದಕ್ಕೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಅವರ ಮೇಲಿನ ದ್ವೇಷ ನನ್ನ ರಾಜಕೀಯ ಜೀವನದ ಮೇಲೆ ಬೀಳುತ್ತಿದೆ. ಕಳೆದ ಎರಡು ಬಾರಿ ಕೂಡ ಅವರ ಮೇಲಿನ ದ್ವೇಷವನ್ನು ನನ್ನ ಮೇಲೆ ಬಿಟ್ಟು ಎರಡು ಸೋಲಿಸಿದ್ದಾರೆ."

ಕಣ್ಣೀರಿಟ್ಟ ನಿಖಿಲ್​ ಕುಮಾರಸ್ವಾಮಿ (ETV Bharat)

"ಎಷ್ಟೋ ಸಂದರ್ಭಗಳಲ್ಲಿ ನಾನು ಒಬ್ಬನೇ ಇದ್ದು ಯೋಚನೆ ಮಾಡುವಾಗ ನಾನು ಮಾಜಿ ಪ್ರಧಾನಿ ಮೊಮ್ಮಗನಾಗಿ ಹಾಗು ಮಾಜಿ ಸಿಎಂ ಮಗನಾಗಿ ಹುಟ್ಟಿದ ಕಾರಣಕ್ಕೆ ನನ್ನನ್ನು ರಾಜಕೀಯವಾಗಿ ಬೆಳೆಯಲು ಬಿಡದೇ ಪ್ರತೀ ಚುನಾವಣೆ ಬಂದಾಗಲೂ ಷಡ್ಯಂತ್ರ ನಡೆಸಿ ಸೋಲಿಸುತ್ತಿದ್ದಾರೆ. ನಾನು ಅಳಬಾರದು ಎಂದು ಸಾಕಷ್ಟು ತಡೆದೆ, ಆದರೆ ಜನತೆಯನ್ನು ನೋಡಿ ನನ್ನ ನೋವನ್ನು ವ್ಯಕ್ತಪಡಿಸಿದ್ದೇನೆ" ಎಂದು ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿ ಭಾವುಕರಾದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಕೂಡ ನಾವು ನಿಮ್ಮನ್ನು ಗೆಲ್ಲಿಸುತ್ತೇವೆಂದು ಅಭಯ ನೀಡಿದರು.

ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಉಪಚುನಾವಣೆ: ಅಬ್ಬರದ ಪ್ರಚಾರ ನಡೆಸಿದ ಉಭಯ ಪಕ್ಷಗಳ ಅಭ್ಯರ್ಥಿಗಳು

Last Updated : Nov 1, 2024, 1:19 PM IST

ABOUT THE AUTHOR

...view details