ಬೆಳಗಾವಿ : ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗ್ತಾರೆ ಎನ್ನುವ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕರ ಜತೆಗೆ ಸವದಿ ಓಡಾಡುತ್ತಿದ್ದಾರೆ. ತಮ್ಮ ವಾಹನದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಜೊತೆಗೆ ಸೋಮವಾರ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಬಂದಿದ್ದರು.
ಬೆಳಗಾವಿಯ ಡಿಸಿಸಿ ಬ್ಯಾಂಕ್ಗೆ ಬರುವ ಮುನ್ನ ಲಕ್ಷ್ಮಣ ಸವದಿ ನಿವಾಸದಲ್ಲಿ ಗೌಪ್ಯ ಚರ್ಚೆ ಮಾಡಲಾಗಿದೆ. ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ಚರ್ಚೆ ನಡೆಸಿ, ಊಟ ಮಾಡಿದ ಬಳಿಕ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಆಗಮಿಸಿದರು. ಡಿಸಿಸಿ ಬ್ಯಾಂಕ್ನಲ್ಲಿ ಸಾಮಾನ್ಯ ಸಭೆ ನಡೆದಿದ್ದು, ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಎಲ್ಲ ನಿರ್ದೇಶಕರು ಪಾಲ್ಗೊಂಡಿದ್ದರು.
ಸಭೆಗೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮಣ ಸವದಿ, ಬೋರ್ಡ್ ಮೀಟಿಂಗ್ ಮಾಡುವ ಸಲುವಾಗಿ ಬಂದಿದ್ದೇವೆ. ವಿಶೇಷತೆ ಏನೂ ಇಲ್ಲ. ಎಲ್ಲರೂ ಸೇರಿ ಮೀಟಿಂಗ್ ಮಾಡ್ತೀವಿ ಎಂದಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಚುನಾವಣೆ ಒಳಗೆ ಕೆಳಗಿಳಿಸುತ್ತಿರಾ? ಎಂಬ ಪ್ರಶ್ನೆಗೆ, ಅದೆಲ್ಲವೂ ಊಹಾಪೋಹ. ಯಾವ ಟೀಂ ಇಲ್ಲ, ರಮೇಶ ಕತ್ತಿ ಇರಲಿ, ನಾನಿರಲಿ ಪಕ್ಷಾತೀತವಾಗಿಯೇ ನಡೆದುಕೊಂಡು ಬಂದಿದ್ದೇವೆ. ಒಂದೂವರೆ ವರ್ಷದಲ್ಲಿ ಚುನಾವಣೆ ಬರುತ್ತೆ ಎಂದರು.
ನನ್ನ ಮುಂದೆ ಅಂತಹ ಪ್ರಶ್ನೆಯೇ ಬಂದಿಲ್ಲ: ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ಅಂತಹ ಯಾವುದೇ ಬೆಳವಣಿಗೆ ಪ್ರಸ್ತಾವನೆ ನನ್ನ ಮುಂದೆ ಈವರೆಗೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸವದಿಯವರನ್ನು ಬಿಜೆಪಿಗೆ ಕರೆತರಲು ಒಂದು ಟೀಂ ರೆಡಿಯಾಗಿದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಎಲ್ಲ ಸಹಜವಾಗಿ ನಡೆಯುವಂತದ್ದು. ಅವರು ಟೀಂ ಮಾಡಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ಕೆಲಸ ಮಾಡ್ತಿದ್ದೀನಿ. ಅಂತಹ ಪ್ರಶ್ನೆ ನನ್ನ ಮುಂದೆ ಇಲ್ಲ. ಇನ್ನು ನಾನಾಗಲಿ, ನನ್ನ ಮಗನಾಗಲಿ ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಅದಕ್ಕಾಗಿ ಅರ್ಜಿಯನ್ನೂ ಸಹ ಹಾಕಿಲ್ಲ ಎಂದು ಹೇಳಿದ್ದಾರೆ.