ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ ರಾಮನಗರ:ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ವಕೀಲರ ಪ್ರತಿಭಟನೆ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎದುರಿನಲ್ಲೇ ಹಾಸಿರುವ ಹಾಸಿಗೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಎರಡೂ ಗೇಟ್ ಮುಂಭಾಗದಲ್ಲಿ ವಕೀಲರು ಧರಣಿ ಕುಳಿತು, ಡಿಸಿ, ಎಸ್ಪಿ ಮನೆಗೆ ಹೋಗದ ಹಾಗೆ ಮಾಡಲಾಗಿತ್ತು. ಪ್ರತಿಭಟನೆಯ ಬಿಸಿಯಿಂದ ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಕಾರ್ತಿಕ್ ರೆಡ್ಡಿ ಕಚೇರಿಯಲ್ಲೇ ಉಳಿದುಕೊಳ್ಳುವಂತೆ ಆಗಿತ್ತು. ಇಡೀ ರಾತ್ರಿ ಧರಣಿ ಕುಳಿತುಕೊಳ್ಳುತ್ತೇವೆ ಎಂದು ನಿನ್ನೆ (ಸೋಮವಾರ) ವಕೀಲರು ಪಟ್ಟು ಹಿಡಿದಿದ್ದರು. ಯಾವುದೇ ಕಾರಣಕ್ಕೂ ಡಿಸಿ ಹಾಗೂ ಎಸ್ಪಿಯನ್ನು ಕಚೇರಿಯಿಂದ ಹೊರಗೆ ಬಿಡುವುದಿಲ್ಲ ಎಂದು ವಕೀಲರು ಅಹೋರಾತ್ರಿ ಧರಣಿ ನಡೆಸಿದರು. ''ನ್ಯಾಯ ಎಲ್ಲಿ ಅಡಗಿದೆ, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಹಾಡು ಹಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ತಿರುವ ಪಡೆದುಕೊಂಡ ಪ್ರತಿಭಟನೆ:ಸುಳ್ಳು ಎಫ್ಐಆರ್ ದಾಖಲು ಮಾಡಿರುವ ಪಿಎಸ್ಐ ಅಮಾನತು ಮಾಡುವಂತೆ ಆಗ್ರಹಿಸಿ ಪೊಲೀಸರ ವಿರುದ್ಧ ನಡೆಯುತ್ತಿದ್ದ ವಕೀಲರ ಪ್ರತಿಭಟನೆ ಇದೀಗ ರಾಜಕೀಯ ತಿರುವು ಪಡೆದಿದೆ. ತಡರಾತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಕೀಲರೊಂದಿಗೆ ಚರ್ಚಿಸಿದ್ದಾರೆ. ವಕೀಲರಿಗೆ ನ್ಯಾಯ ಕೊಡಿಸುವುದಾಗಿ ಎಚ್ಡಿಕೆ, ಆರ್. ಅಶೋಕ್ ಭರವಸೆ ಕೊಟ್ಟಿದ್ದಾರೆ.
ವಕೀಲರ ಪ್ರತಿಭಟನೆ ಹಿನ್ನೆಲೆ ಬಿಗಿ ಭದ್ರತೆ:ವಕೀಲರ ಪ್ರತಿಭಟನೆಗೆ ಬಿಗಿ ಪೋಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿದೆ. 40 ವಕೀಲರ ಮೇಲೆ ರಾಮನಗರದ ಐಜೂರು ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಆದರ್ಶ್ ಅಗರ್ವಾಲ್, ಬೆಂಗಳೂರು ಪರಿಷತ್ ಅಧ್ಯಕ್ಷ ವಿಶಾಲ್ ರಘು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಾವಿರಾರು ವಕೀಲರು ಭಾಗಿಯಾಗಿಯಾದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. 900ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಭದ್ರತಾ ಕಾರ್ಯಕ್ಕೆ ಒಬ್ಬ ಎಸ್ಪಿ, ಇಬ್ಬರು ಎಎಸ್ಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಮೂರು ಮಂದಿ ಡಿವೈಎಸ್ಪಿ, 13 ಮಂದಿ ಸಿಪಿಐ, 45 ಪಿಎಸ್ಐ, 60 ಎಎಸ್ಐ, 700 ಮಂದಿ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎರಡು ಕೆಎಸ್ಆರ್ಪಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಚಲನ ವಲನಗಳ ಕಣ್ಗಾವಲಿನ ಉದ್ದೇಶಕ್ಕೆ 40 ಹ್ಯಾಂಡಿಕ್ಯಾಮ್, 2 ಡ್ರೋಣ್, 100 ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇಂದು ಕೂಡ ವಕೀಲರ ಪ್ರತಿಭಟನೆ ಮುಂದುವರೆಯಲಿದ್ದು, ಪಿಎಸ್ಐ ಅಮಾನತು ಮಾಡುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ:ಮಗುವಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಆರೋಪ: ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟಿಸಿದ ಪೋಷಕರು