ಬೆಂಗಳೂರು:ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಹಾಗಾಗಿ, ಅವರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ. ಆದರೆ, ಕಾಲಕಾಲಕ್ಕೆ ಅತಿಥಿ ಉಪನ್ಯಾಸಕರ ಇತರ ಸಮಸ್ಯೆಗಳ ಪರಿಹಾರ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಇಂದು ನಿಯಮ 72ರ ಅಡಿ ಸದಸ್ಯರಾದ ಅ.ದೇವೇಗೌಡ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಯಡಿ ಚಿದಾನಂದ, ಮರಿತಿಬ್ಬೇಗೌಡ, ಬೋಜೇಗೌಡ, ಡಿ.ಎಸ್.ಅರುಣ್ ಅವರ ಚರ್ಚೆಗೆ ಉತ್ತರಿಸಿದ ಸಚಿವರು, "ಉನ್ನತ ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ನೇಮಕಾತಿ ಮಾಡಿಕೊಳ್ಳಲು ಅವಕಾಶವಿಲ್ಲ. ಇದಕ್ಕೆ ಬದಲಾಗಿ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಆಯಾ ಶೈಕ್ಷಣಿಕ ವರ್ಷಕ್ಕೆ ಸೀಮಿತವಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ತಾತ್ಕಾಲಿಕ ವ್ಯವಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಕುಮಾರ ನಾಯ್ಕ್ ಸಮಿತಿ ವರದಿಯೂ ಕೂಡ ಅತಿಥಿ ಉಪನ್ಯಾಸಕರ ಖಾಯಮಾತಿ ಸಾಧ್ಯವಿಲ್ಲ ಎಂದಿದೆ. ಹಾಗಾಗಿ, ಆ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.
"14 ಸಾವಿರ ರೂ ಇದ್ದ ವೇತನವನ್ನು ನಾವು 32 ಸಾವಿರ ರೂ.ಗೆ ಹೆಚ್ಚಿಸಿದ್ದೇವೆ. 10-15 ವರ್ಷ ಸೇವೆ ಮಾಡಿದವರಿಗೆ ವರ್ಷಕ್ಕೆ 3 ಅಂಕ ನೀಡಲಾಗುತ್ತದೆ. ಇದು ಅವರ ಪರಿಗಣನೆಗೆ ಸಹಕಾರಿಯಾಗಲಿದೆ. ಕಾರ್ಯಭಾರ ಪ್ರತಿ ವರ್ಷ ಬದಲಾವಣೆಯಾಗುತ್ತದೆ. ಸೀನಿಯಾರಿಟಿ ಇದ್ದವರಿಗೆ ತೊಂದರೆಯಾಗಲ್ಲ. ಹಾಗಾಗಿ, ಸೇವಾ ಭದ್ರತೆ ಭಯ ಬೇಡ" ಎಂದರು.