ಪುತ್ತೂರು:ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಇಂದು ನಸುಕಿನ ಜಾವದ ವೇಳೆ ಗುಡ್ಡ ಕುಸಿದಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಡಬ:ಕಡಬ ತಾಲೂಕಿನಲ್ಲಿ ಮಳೆಹಾನಿಗಳು ಸಂಭವಿಸಬಹುದಾದ ಪ್ರದೇಶಗಳಿಗೆ ಪುತ್ತೂರು ಉಪ ಆಯುಕ್ತ ಜುಬಿನ್ ಮೊಹಪಾತ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಮಳೆ, ನೆರೆ, ಗಾಳಿ ಹಾಗೂ ಭೂಕುಸಿತದಿಂದಾಗಿ ಅಪಾಯಗಳು ಎದುರಾಗದಂತೆ ತುರ್ತು ಕ್ರಮ ವಹಿಸುವಂತೆ ಮತ್ತು ಈಗಾಗಲೇ ಎದುರಾಗಿರುವ ಸಾರ್ವಜನಿಕರ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ" ಸೂಚನೆ ನೀಡಿದ್ದಾರೆ.
ನೆಲ್ಯಾಡಿಯಲ್ಲಿ, ಇಚ್ಲಂಪಾಡಿ ಪ್ರದೇಶದ ಹಲವಾರು ಪ್ರದೇಶಗಳಿಗೆ, ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯೊಂದರ ಪ್ರದೇಶದಲ್ಲಿ, ಕೋಡಿಂಬಾಳ ಗ್ರಾಮದ ಮಡ್ಯಡ್ಕದಿಂದ ಬೊಳ್ಳೆಕುಕ್ಕು ಪ್ರದೇಶದಲ್ಲಿ ಮತ್ತು ಕಡಬ ಪೇಟೆಯ ಸಭಾಭವನವೊಂದರ ಸಮೀಪದಲ್ಲಿ ಉಪ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ತುರ್ತು ಪರಿಸ್ಥಿತಿಯ ಸೇವೆಗಾಗಿ ಈಗಾಗಲೇ ಜಿಲ್ಲಾಡಳಿತ ಹೊರಡಿಸಿದ ಹೆಲ್ಫ್ ಸೆಂಟರ್ ನಂಬರ್ಗಳನ್ನು ಬಳಸುವಂತೆ ಅವರು ಹೇಳಿದ್ದಾರೆ.