ಬೆಂಗಳೂರು: ನಗರದ ಲಾಲ್ ಬಾಗ್‌ನಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ 215ನೇ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಅಧಿಕೃತ ತೆರೆಬಿತ್ತು. ಕೊನೆಯ ದಿನ ಪ್ರದರ್ಶನ ವೀಕ್ಷಿಸಲು ಸಸ್ಯಕಾಶಿಗೆ ಜನಸಾಗರವೇ ಹರಿದುಬಂದಿತ್ತು.
ಜನವರಿ 18ರಿಂದ 28ರವರೆಗೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಒಟ್ಟಾರೆ 5.61 ಲಕ್ಷ ಜನ ಭೇಟಿ ನೀಡಿದ್ದಾರೆ. ಇದರಿಂದ ಇಲ್ಲಿಯವರೆಗೂ ಒಟ್ಟು 2.59 ಕೋಟಿ ರೂ. ಹಣ ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ಜ.18ರಿಂದ ಪ್ರಾರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಮೊದಲ ದಿನ ಅಂದರೆ ಜನವರಿ 19ರಂದು 18,256 ಜನ ಆಗಮಿಸಿ, 6.33 ಲಕ್ಷ ರೂ. ಹಣ ಸಂಗ್ರಹವಾಗಿತ್ತು. ಜ.20ರಂದು 26 ಸಾವಿರ ಮಂದಿ ಭೇಟಿ ನೀಡಿದ್ದು 18 ಲಕ್ಷ ರೂ ಸಂಗ್ರಹವಾಗಿತ್ತು. ಉಳಿದಂತೆ, ಜ.21ರಂದು 28,200 ಜನ ಆಗಮಿಸಿದ್ದು 29.5 ಲಕ್ಷ ರೂ ಸಂಗ್ರಹವಾಗಿತ್ತು. ಗಣರಾಜ್ಯೋತ್ಸವ ದಿನ 96,500 ಮಂದಿ ಭೇಟಿ ನೀಡಿದ್ದರು. ಈ ಮೂಲಕ 65 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಅಲ್ಲದೇ ಸಾಲು ಸಾಲು ರಜಾ ದಿನಗಳಿದ್ದ ಕಾರಣಕ್ಕೆ ತೋಟಗಾರಿಕಾ ಇಲಾಖೆ ಪ್ರದರ್ಶನವನ್ನು ಮತ್ತೆರಡು ದಿನ ವಿಸ್ತರಿಸಿದ್ದರು.