ಕರ್ನಾಟಕ

karnataka

ETV Bharat / state

ಮಂಗಳೂರು: ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಪ್ರಯೋಗಾಲಯದ ಪರೀಕ್ಷಾ ವರದಿ ಬಹಿರಂಗ - Mangaluru Tender Coconut Water Case - MANGALURU TENDER COCONUT WATER CASE

ಎಳನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯದ ಪರೀಕ್ಷಾ ವರದಿಯಲ್ಲಿ ಎಳನೀರು ಸಹಜವಾಗಿತ್ತು ಎಂದು ತಿಳಿದುಬಂದಿದೆ.

ಮಂಗಳೂರು: ಎಳನೀರು ಕುಡಿದು ಅಸ್ವಸ್ಥ ಪ್ರಕರಣ - ಪ್ರಯೋಗಾಲಯ ಪರೀಕ್ಷಾ ವರದಿ ಬಹಿರಂಗ
ಮಂಗಳೂರು: ಎಳನೀರು ಕುಡಿದು ಅಸ್ವಸ್ಥ ಪ್ರಕರಣ - ಪ್ರಯೋಗಾಲಯ ಪರೀಕ್ಷಾ ವರದಿ ಬಹಿರಂಗ

By ETV Bharat Karnataka Team

Published : Apr 30, 2024, 9:32 PM IST

ಮಂಗಳೂರು:ಇತ್ತೀಚೆಗೆ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯದ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಎಳನೀರು ಸಹಜವಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಗರದ ಹೊರವಲಯದ ಅಡ್ಯಾರಿನ ಬೊಂಡ ಫ್ಯಾಕ್ಟರಿಯಲ್ಲಿ ಏ.9ರಂದು ಖರೀದಿಸಿದ ಎಳನೀರು ಕುಡಿದವರಲ್ಲಿ 138 ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಘಟನೆ ನಡೆದ ಎರಡು ದಿನಗಳ ನಂತರ ಇದು ಗಮನಕ್ಕೆ ಬಂದಿದ್ದು, ಆ ದಿನ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಎಳನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ಪರೀಕ್ಷಾ ವರದಿ ಏ.22ರಂದು ಆರೋಗ್ಯ ಇಲಾಖೆಗೆ ತಲುಪಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ, "ವರದಿಯಲ್ಲಿ ಎಳನೀರಿನಲ್ಲಿ ಯಾವುದೇ ಕಲಬೆರಕೆ ಕಂಡುಬಂದಿಲ್ಲ. ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ ಕೆಲವರ ದೇಹದಲ್ಲಿ ಇಕೊಲೈ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಮನುಷ್ಯನ ಕರುಳಿನಲ್ಲಿ ಈ ಬ್ಯಾಕ್ಟೀರಿಯಾ ಇರುತ್ತದೆ. ಆದರೆ ಅವುಗಳ ಪ್ರಮಾಣ ಹೆಚ್ಚಾದರೆ, ಕೆಲವೊಮ್ಮೆ ಆರೋಗ್ಯ ಸಮಸ್ಯೆ ಬರುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

"ಅಡ್ಯಾರಿನಲ್ಲಿರುವ ಎಳನೀರು ಗಂಜಿಯಿಂದ ಐಸ್‌ಕ್ರೀಮ್ ತಯಾರಿಸುವ ಘಟಕ ಹಾಗೂ ಸಂಸ್ಥೆಯ ಎಳನೀರು ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಈಗಲೂ ಅವು ಬಂದ್ ಆಗಿಯೇ ಇವೆ. ಫ್ಯಾಕ್ಟರಿಯವರು ಸ್ವಯಂಪ್ರೇರಿತರಾಗಿ ಎಳನೀರು ನೀಡುವುದನ್ನು ನಿಲ್ಲಿಸಿದ್ದಾರೆ. ಅಡ್ಯಾರ್‌ನಲ್ಲಿ ಪಲ್ಟಿಂಗ್‌ ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಗ್ರಾಹಕರಿಗೆ ಆಹಾರ ನೀಡುವಾಗ ನಿಯಮ ಪಾಲನೆ, ಶುಚಿತ್ವಕ್ಕೆ ಸಂಬಂಧಿಸಿ ಕೆಲವು ಅಂಶಗಳ ಕಟ್ಟುನಿಟ್ಟು ಪಾಲನೆಗೆ ಆಹಾರ ಸುರಕ್ಷಾ ಅಫಿಡವಿಟ್​ ಅನ್ನು ಫ್ಯಾಕ್ಟರಿಯಿಂದ ಪಡೆಯಲು ಆಹಾರ ಸುರಕ್ಷಾ ಅಧಿಕಾರಿಗೆ ಸೂಚನೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಎನ್ಐಟಿಕೆ ಟೋಲ್ ಗೇಟ್ ಮುತ್ತಿಗೆ ಪ್ರಕರಣ - 101 ಮಂದಿಗೆ ಸಮನ್ಸ್ ಜಾರಿ - NITK toll gate case

ABOUT THE AUTHOR

...view details