ಹುಬ್ಬಳ್ಳಿ(ಧಾರವಾಡ):ನಟ ದರ್ಶನ್ ಅವರನ್ನು ಈ ಹಿಂದೆ ರಾಜ್ಯ ಸರ್ಕಾರ ರೈತರ ರಾಯಭಾರಿಯನ್ನಾಗಿ ಮಾಡಿತ್ತು. ಆದರೆ, ಅವರ ಹೆಸರೀಗ ಪ್ರಕರಣವೊಂದರಲ್ಲಿ ಕೇಳಿ ಬಂದಿದೆ. ಸರ್ಕಾರ ರಾಯಭಾರಿಗಳನ್ನು ನೇಮಿಸುವ ಮುನ್ನ ಪರಾಮರ್ಶೆ ನಡೆಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಶನ್ ಚಲನಚಿತ್ರ ನಟ. ಸಮಾಜದಲ್ಲಿ ಒಂದು ಸ್ಥಾನಕ್ಕೆ ಬಂದ ಮೇಲೆ ಮಾದರಿ ನಡೆ ಅನುಸರಿಸಬೇಕಿತ್ತು. ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದು ಸರಿಯಲ್ಲ ಎಂದರು.
ನಟರು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಆದರೆ, ಇತ್ತೀಚಿನ ಬೆಳವಣಿಗೆಗಳು ರಾಜ್ಯವೇ ತಲೆತಗ್ಗಿಸುವಂತಿವೆ. ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮುಂದಾದರೂ ಕೂಡಾ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಉತ್ತಮ ದಾರಿಯಲ್ಲಿ ನಡೆದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ, ಖರೀದಿ ಕೇಂದ್ರದ ಅನುದಾನವನ್ನು ನೂತನ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಿ ರಾಜ್ಯಕ್ಕಾಗುವ ಅನ್ಯಾಯ ತಪ್ಪಿಸಲಿ ಎಂದರು.
ರೈತರು ಬೆಳೆದ ಆಹಾರ ಧಾನ್ಯಗಳ ಎಂಎಸ್ಪಿ ಖರೀದಿ ಅನುದಾನದಲ್ಲಿ ರಾಜ್ಯಕ್ಕೆ ನೀಡುವ ಪ್ರಮಾಣ ಏರಿಸಬೇಕು. ಪಂಜಾಬ್, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳನ್ನು ರೈತರಿಂದ ಶೇ 45ರಷ್ಟು ಖರೀದಿ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಶೇಕಡಾ ಮೂರರಷ್ಟು ಎಂಎಸ್ಪಿ ಕೇಂದ್ರಗಳ ಮೂಲಕ ಖರೀದಿಸುತ್ತಾರೆ. ಕೇಂದ್ರ ಸರ್ಕಾರ ಖರೀದಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಈ ತಾರತಮ್ಯ ನೀತಿಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.