ಧಾರವಾಡ:ಬರಗಾಲದ ಬೇಗೆಯಿಂದ ಬಳಲುತ್ತಿರುವ ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸಿಗುತ್ತಿಲ್ಲ. ಹಳ್ಳಿಗಳಲ್ಲಿ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಛೀಮಾರಿ ಹಾಕಿ ಸ್ವಾಗತ ಕೋರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ ಕರೆ ನೀಡಿದರು.
ಈ ಕುರಿತು ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸಭೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಕಾಡುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು, ದನಗಳಿಗೆ ಮೇವು ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ನಾನಾ ಕಸರತ್ತು ಮಾಡುತ್ತಿವೆ. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿದ್ದಾರೆ. ರೈತರು ಸೊರಗುತ್ತಿದ್ದಾರೆ. ಹಳ್ಳಿಗಳಿಗೆ ಮತ ಕೇಳಲು ಬರುವ ರಾಜಕೀಯ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಛೀಮಾರಿ ಹಾಕಿ ಸ್ವಾಗತಿಸುವ ಮೂಲಕ ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕು ಎಂದು ಹೇಳಿದರು.
ದೇಶದಲ್ಲಿ 70ರಷ್ಟು ಇರುವ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಬೆಲೆ ನಿಗದಿ ಮಾಡಿ ಎಂದರೆ ರೈತರ ಮೇಲೆ ಗೋಲಿಬಾರ್ ಮಾಡುತ್ತಾರೆ. ಆದರೆ ಶೇಕಡ 2 ರಷ್ಟು ಇರುವ ಸರ್ಕಾರಿ ನೌಕರರಿಗೆ 27 ರಷ್ಟು ಸಂಬಳ ಏರಿಕೆ ಮಾಡಬೇಕು ಎನ್ನುವ ವರದಿ ಸಲ್ಲಿಸುತ್ತಾರೆ. ಇಂತಹ ಪುರುಷಾರ್ಥಕ್ಕೆ ರೈತರು ಎಂಪಿಗಳನ್ನು ಗೆಲ್ಲಿಸಬೇಕೆ?.. ದೇಶದಲ್ಲಿ ಅನ್ನ ನೀಡುವ ರೈತನನ್ನು ಅನಾಥರನ್ನಾಗಿ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.