ಬೆಳಗಾವಿ: "ರಾಜಕೀಯ ಮುಖಂಡರಿಗೆ ಅಧಿಕಾರದ ಹುಚ್ಚು ಹಿಡಿದಿದ್ದು, ರೈತರು ಭೀಕರ ಬರದಿಂದ ತತ್ತರಿಸಿ ಹೋಗಿದ್ದಾರೆ. ಇಂಥ ಸ್ಥಿತಿಯಲ್ಲಿ ರೈತರನ್ನು ಬದುಕಿಸುವವರು ಯಾರು..? ಇಂದು ರಾಜಕಾರಣ ಕುಟುಂಬ ರಾಜಕೀಯವಾಗಿ, ವ್ಯಾಪಾರೀಕರಣವಾಗಿದೆ" ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ "ಬರಗಾಲದ ಸಂಕಷ್ಟ ರೈತರ ದಿಕ್ಸೂಚಿ" ವಿಭಾಗೀಯ ಮಟ್ಟದ ಚಿಂತನ ಮಂಥನ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರು ಇಲ್ಲವಾಗಿದ್ದಾರೆ. ರಾಜಕೀಯ ಮುಖಂಡರು ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ. ರಾಜಕೀಯ ಕ್ಷೇತ್ರ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬರದ ಸಂಕಷ್ಟ ಕಾಲದಲ್ಲಿ ಜಗಳವಾಡುತ್ತಾ ಮನರಂಜನೆ ನೀಡುತ್ತಿದ್ದಾರೆ. ಇದರಿಂದ ರೈತರ ಹೊಟ್ಟೆ ತುಂಬುವುದಿಲ್ಲ. ಈ ನಾಟಕ ಬಿಟ್ಟು, ಪರಿಹಾರ ನೀಡಿ. ಇಲ್ಲವೇ ಮತ ಕೇಳಲು ನಮ್ಮ ಬಳಿ ಬರಬೇಡಿ" ಎಂದಿದ್ದಾರೆ. ಅಲ್ಲದೇ, ಅಭ್ಯರ್ಥಿಗಳು ಊರಿಗೆ ಕಾಲಿಡದಂತೆ ಛೀಮಾರಿ ಹಾಕಿ, ಅವರಿಗೆ ಗ್ರಾಮಗಳಿಗೆ ಪ್ರವೇಶ ನಿರ್ಬಂಧಿಸಿ ಎಂದು ರೈತರಿಗೆ ಕುರುಬೂರು ಶಾಂತಕುಮಾರ ಕರೆ ನೀಡಿದ್ದಾರೆ.
"ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದ್ದು, ದನಕರುಗಳಿಗೂ ಮೇವು ಸಿಗುತ್ತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಚುನಾವಣೆ ಕಾರಣ ಹೇಳಿ ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ. ರಾಜಕೀಯ ಪಕ್ಷದ ಮುಖಂಡರು ಅಧಿಕಾರ ಹಿಡಿಯುವ ಹುಚ್ಚಿನಲ್ಲಿ ತೇಲಾಡುತ್ತಿದ್ದಾರೆ. ಆದರೆ, ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ಭೀಕರ ಬರದಿಂದ ರೈತರ ಬೆಳೆಗಳು ಒಣಗುತ್ತಿದ್ದು, ಕೊಳವೆ ಬಾವಿಗಳು ಬತ್ತಿವೆ. ಇದು ರಾಜಕೀಯ ಪಕ್ಷಗಳಿಗೆ ಕಾಣುತ್ತಿಲ್ಲವೇ..? ರೈತರು ಎಚ್ಚೆತ್ತುಕೊಂಡು ಹಳ್ಳಿಗಳಲ್ಲಿ ಗುಡಿಗೋಪುರ ಕಟ್ಟುವ ಚಿಂತನೆ ಕಡಿಮೆ ಮಾಡಿ. ಕೆರೆ - ಕಟ್ಟೆ ಹೂಳೆತ್ತುವ ಮೂಲಕ ಅವುಗಳ ಪುನರುಜ್ಜೀವನ ಹಾಗೂ ಹೊಸದಾಗಿ ನಿರ್ಮಿಸಲು ಮುಂದಾಗಬೇಕು" ಎಂದು ಶಾಂತಕುಮಾರ ಸಲಹೆ ನೀಡಿದರು.