ಮೈಸೂರು: ಜಿಲ್ಲೆಯ ಕಾವೇರಿ, ಕಪಿಲ ಹಾಗೂ ಸ್ಫಟಿಕ ಸರೋವರಗಳು ಸೇರುವ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10ರಿಂದ 3 ದಿನಗಳ 13ನೇ ಕುಂಭಮೇಳ ನಡೆಯಲಿದೆ.
2021ರಲ್ಲಿ ಕೋವಿಡ್ ಕಾರಣದಿಂದಾಗಿ ಕುಂಭಮೇಳ ನಡೆದಿರಲಿಲ್ಲ. ಆರು ವರ್ಷಗಳ ನಂತರ ನಡೆಯುತ್ತಿರುವ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಕಾರ್ಯಕ್ರಮಗಳ ವಿವರ ಇಲ್ಲಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ಪವಿತ್ರ ಸ್ನಾನ ನಡೆಯುತ್ತಿದ್ದರೆ, ಕರ್ನಾಟಕದ ಪವಿತ್ರ ಕ್ಷೇತ್ರವೆಂದೇ ಟಿ.ನರಸೀಪುರದ ತ್ರಿವೇಣಿ ಸಂಗಮ ಹೆಸರುವಾಸಿ. ಫೆ.12ರಂದು ಪವಿತ್ರ ಕುಂಭಸ್ನಾನ ನಡೆಯಲಿದೆ. ಅಂದು ಬೆಳಗ್ಗೆ 9ರಿಂದ 9.30ರೊಳಗೆ ಶುಭ ಮೀನ ಲಗ್ನ ಮತ್ತು ಮಧ್ಯಾಹ್ನ 12ರಿಂದ 1 ಗಂಟೆವರೆಗೆ ವೃಷಭ ಲಗ್ನದಲ್ಲಿ ಕುಂಭಮೇಳದ ಪುಣ್ಯಸ್ನಾನ ಮಾಡಲು ಮುಹೂರ್ತ ನಿಗದಿ ಮಾಡಲಾಗಿದೆ.
ಅಧಿಕಾರಿಗಳೊಂದಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಶ್ರೀಗಳು ಪರಿಶೀಲನೆ ನಡೆಸಿದರು. (ETV Bharat) ಭರದ ಸಿದ್ಧತೆ: ಕುಂಭಮೇಳದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಾಣ, ಸ್ವಚ್ಛತಾ, ಲೈಟಿಂಗ್ಸ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿವೆ. ನದಿಯ ಒಳಗೆ ಬೊಂಬುಗಳಿಂದ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ. ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ನದಿ ಪಾತ್ರದ ಹಲವೆಡೆ ಮುಳುಗುತಜ್ಞರನ್ನು ನಿಯೋಜನೆ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ಕಾರ ಇದಕ್ಕಾಗಿ 6 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.
ಧಾರ್ಮಿಕ ಕಾರ್ಯಕ್ರಮಗಳು: ಫೆ.10ರಂದು ತ್ರಯೋದಶಿ, ಪುಷ್ಯ ಪ್ರಾತಃಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ, ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಥಿತಿ ಗಣ್ಯರಿಂದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.
ಅಧಿಕಾರಿಗಳೊಂದಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಶ್ರೀಗಳು ಪರಿಶೀಲನೆ ನಡೆಸಿದರು. (ETV Bharat) ಗಂಗಾರತಿ ಮಾದರಿಯಲ್ಲಿ ದೀಪಾರತಿ: ಫೆ.11ರಂದು, ಚತುರ್ದಶಿ, ಆಶ್ಲೇಷ, ಪ್ರಾತಃ ಪುಣ್ಯಾಹ - ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 4ಕ್ಕೆ ಮಹಾತ್ಮರ, ಸಂತರ, ಮಹಾ ಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ. ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದಿಂದ ಟಿ.ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ರುದ್ರ ಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾ ಪೂಜೆಯ ವೇಳೆ ವಾರಾಣಸಿ ಗಂಗಾರತಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ನಡೆಯಲಿದೆ.
ಕುಂಭಮೇಳದ ಕೊನೆಯ ದಿನ ಫೆ.12ರಂದು ಮಾಘ ಪೂರ್ಣಿಮೆಯಂದು ಬೆಳಗ್ಗೆ ಮಘ ನಕ್ಷತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.
ಅಧಿಕಾರಿಗಳೊಂದಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಶ್ರೀಗಳು ಪರಿಶೀಲನೆ ನಡೆಸಿದರು. (ETV Bharat) ಮಹೋದಯಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಅಂದು ಬೆಳಗ್ಗೆ 9ರಿಂದ 9.30ರ ವರೆಗಿನ ಮೀನ ಲಗ್ನ ಮತ್ತು ಮಧ್ಯಾಹ್ನ 12ರಿಂದ 1ರ ವರೆಗಿನ ವೃಷಭ ಲಗ್ನದಲ್ಲಿ ಸಮಯ ನಿಗದಿ ಮಾಡಲಾಗಿದೆ.
ಕುಂಭಮೇಳದಲ್ಲಿ 3 ಸ್ನಾನಘಟ್ಟಕ್ಕೆ ವ್ಯವಸ್ಥೆ: ಫೆ.12ರಂದು ಸಾವಿರಾರು ಜನರು ಕುಂಭಸ್ನಾನ ಮಾಡುವ ನಿರೀಕ್ಷೆ ಇದ್ದು, ಅಗಸ್ತ್ಯೇಶ್ವರ, ಗುಂಜಾ ನರಸಿಂಹಸ್ವಾಮಿ ಮತ್ತು ಭಿಕ್ಷೇಶ್ವರ ಸ್ವಾಮಿ ದೇವಾಲಯದ ಬಿಳಿ ಮೂರು ಕಡೆ ಸ್ನಾನಘಟ್ಟದ ವ್ಯವಸ್ಥೆ ಮಾಡಲಾಗಿದೆ.
ನದಿಯಲ್ಲಿ ಬ್ಯಾರಿಕೇಡ್ ಆಳವಡಿಸುವ ಮೂಲಕ ಭದ್ರತಾ ವ್ಯವಸ್ಥೆ: ನದಿಯಲ್ಲಿ ನೀರು ಹೆಚ್ಚಿರುವ ಕಾರಣ 6 ಅಡಿಯಷ್ಟು ಆಳವಿದ್ದು, ಇದರಿಂದ ವಯಸ್ಸಾದವರು ಮತ್ತು ಮಕ್ಕಳು ಮುಳುಗದಂತೆ ಕ್ರಮವಹಿಸಲಾಗಿದೆ. ನದಿಯ 3 ಅಡಿ ಆಳದವರೆಗೆ ಹೋಗಿ ಸ್ನಾನಕ್ಕೆ ಅವಕಾಶ ಮಾಡಿ ಕೊಡಲಾಗಿದ್ದು, 3 ಅಡಿ ಆಳದ ನಂತರ ಬ್ಯಾರಿಕೇಡ್ ನಿರ್ಮಾಣ ಮಾಡಿ, ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನದಿಯಲ್ಲಿ ನೀರು ಹೆಚ್ಚಿರುವ ಕಾರಣ ಈ ಬಾರಿ ತೇಲುವ ಸೇತುವೆ ನಿರ್ಮಾಣ ಮಾಡುತ್ತಿಲ್ಲ.
ಬೋಟ್ ಮತ್ತು ನುರಿತ ಈಜು ತಜ್ಞರ ನಿಯೋಜನೆ: ಕುಂಭಸ್ನಾನಕ್ಕೆ ಬರುವವರು ಮುಳಗಿ ಅಥವಾ ನೀರಿನಲ್ಲಿ ಕೊಚ್ಚಿಹೋಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ 15ಕ್ಕೂ ಹೆಚ್ಚು ಬೋಟ್ಗಳನ್ನು ನಿಯೋಜನೆ ಮಾಡಿದೆ. ಇದರ ಜೊತಗೆ ನದಿ ಪಾತ್ರದ ವಿವಿಧ ಭಾಗಗಳಲ್ಲಿ ನುರಿತ ಈಜು ತಜ್ಞರನ್ನು ನೇಮಿಸಲಾಗಿದ್ದು, ಯಾವುದೇ ಅಹಿತಕಾರ ಘಟನೆ ಸಂಭವಿಸಿದಂತೆ ಕ್ರಮ ವಹಿಸಲಾಗಿದೆ.
ಅಧಿಕಾರಿಗಳೊಂದಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಶ್ರೀಗಳು ಪರಿಶೀಲನೆ ನಡೆಸಿದರು. (ETV Bharat) ಅಗತ್ಯ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು: ಸ್ನಾನಘಟ್ಟಗಳಲ್ಲಿ 20ಕ್ಕೂ ಹೆಚ್ಚು ಬಟ್ಟೆ ಬದಲಿಸಲು ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ 10 ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಈ ಬಾರಿಯ ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ. ಅದಕ್ಕಾಗಿ ಸಂಗಮ ಸ್ಥಳದ 3 ಕಡೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈ ಮೂರು ದಿನಗಳು ಸುಗಮ ಸಂಗೀತ, ಜಾನಪದ ಗೀತೆಗಳು, ನೃತ್ಯರೂಪಕ ಮತ್ತು ಸ್ಥಳೀಯ ಕಲಾ ತಂಡಗಳಿಂದ ಪೌರಾಣಿಕ ನಾಟಕಗಳನ್ನು ಏರ್ಪಡಿಸಲಾಗಿದೆ.
ಟಿ.ನರಸೀಪುರದ ತ್ರಿವೇಣಿ ಸಂಗಮ (ETV Bharat) ಗಣ್ಯರು, ಅನೇಕ ಮಠಾಧೀಶರು ಭಾಗಿ: ಕುಂಭಮೇಳದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಭಾಗವಹಿಸಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ ವಿವಿಧ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಕುಂಭಮೇಳದ ಉದ್ಘಾಟನೆ ಮಾಡಲಿದ್ದು, ಸಚಿವರಾದ ಕೆ.ವೆಂಕಟೇಶ್, ರಾಮಲಿಂಗಾರೆಡ್ಡಿ, ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಯದುವೀರ್ ಒಡೆಯರ್, ಸ್ಥಳೀಯ ಶಾಸಕರು ಭಾಗಿಯಾಗಲಿದ್ದಾರೆ.
ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೇರಿದಂತೆ ಹರಗುರುಚರ ಮೂರ್ತಿಗಳು ಕಾರ್ಯಕ್ರಮಗಳ ಸಾನಿಧ್ಯ ವಹಿಸಲಿದ್ದಾರೆ.
ಇದನ್ನೂ ಓದಿ:ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ