ಮಂಡ್ಯ: "ಸಿಎಂಗೆ ಯಾವುದೇ ಡಿಸ್ಟರ್ಬ್ ಆಗಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ತಾನೇ ಶೇಕ್ ಆಗೋದು. ಹಾಗೇನಾದರೂ ಆಗಿದ್ದರೆ, ಇವತ್ತು ನೆರೆ ಪ್ರದೇಶಕ್ಕೆ ಹೋಗುತ್ತಿರಲಿಲ್ಲ. ಮನೆಯಲ್ಲಿ ಇರುತ್ತಿದ್ದರು. ಸಿಎಂ ರಾಜೀನಾಮೆ ಪ್ರಶ್ನೆ ಬರಲ್ಲ. ಹೈಕಮಾಂಡ್ ಯಾಕೆ ರಾಜೀನಾಮೆ ಕೇಳುತ್ತದೆ? ಸಿಎಂ ಅವರು ಧೈರ್ಯವಾಗಿ ಇದ್ದಾರೆ" ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಇಂದು ಮಂಡ್ಯದ ಕೆಆರ್ಎಸ್ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿ ಚೆಕ್ ತಗೊಂಡಿದ್ದಾರಾ? ಏನಾದರೂ ಆದೇಶ ಮಾಡಿದ್ದಾರಾ? ಸೈಟ್ ಕೊಟ್ಟಿರುವುದು ಬಿಜೆಪಿಯವರು. ತಪ್ಪು ಬಿಜೆಪಿ ಅವರದ್ದು. ಇವರಿಗೆ ಸೈಟ್ ಮಂಜೂರು ಆದಾಗ ಡಿಸಿಎಂ ಆಗಿರಲಿಲ್ಲ. ಕುಮಾರಸ್ವಾಮಿ ಅವರದ್ದು ಡಬಲ್ ಸ್ಟಾಂಡ್ ರಾಜಕಾರಣ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿ, ಕೇಂದ್ರ ಸಚಿವರಾಗಿದ್ದಾರೆ. ಏನು ಮಾತನಾಡುತ್ತಾರೋ ಗೊತ್ತಿಲ್ಲ. ಪಾದಯಾತ್ರೆಗೆ ಬೆಂಬಲ ಕೊಡಲ್ಲ ಎಂದಿದ್ದರು. ಇದೀಗ ನಿನ್ನೆ ಸಂಜೆ ಬೆಂಬಲ ಅಂತ ಹೇಳಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಆರ್ಎಸ್ಎಸ್ ಹಾಗೂ ಜೆಡಿಎಸ್ಗೆ ಭಯವಿದೆ" ಎಂದರು.
ಕಾವೇರಿಗೆ ಮತ್ತೊಮ್ಮೆ ಬಾಗಿನ ವಿಚಾರವಾಗಿ ಮಾತನಾಡಿ, "ಕಳೆದ ಬಾರಿ ಬರಗಾಲ ಅಂತ ಲೇವಡಿ ಮಾಡಿದ್ದರು. ಆಗ ನನ್ನ ಶ್ರೀಮತಿ ಚಾಮುಂಡೇಶ್ವರಿ ಹಾಗೂ ಕಾವೇರಿ ಮಾತೆಗೆ ಹರಕೆ ಮಾಡಿಕೊಂಡಿದ್ದರು. ಮೊನ್ನೆ ಸಿಎಂ ಬಾಗಿನ ಬಿಡುವಾಗ ಬಾಗಿನ ಬಿಡಲು ಆಗಿರಲಿಲ್ಲ. ಹಾಗಾಗಿ ನಾವು ಇಂದು ಬಾಗಿನ ಬಿಟ್ಟಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.
ಕುಮಾರಸ್ವಾಮಿ ಸಚಿವರಾಗಿದ್ದಕ್ಕೆ ಕೆಆರ್ಎಸ್ ಭರ್ತಿಯಾಗಿದೆ ಎಂಬ ಮಾಜಿ ಸಚಿವ ಪುಟ್ಟರಾಜು ಹೇಳಿಕೆ ಕುರಿತು ಮಾತನಾಡಿ, "ಹಾಗಾದ್ರೆ ಕುಮಾರಸ್ವಾಮಿ ರಾಜ್ಯದಲ್ಲಿ ಇರಲಿಲ್ಲವಾ? ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರಾಗಿದ್ದರು, ಆಗ ಚನ್ನಪಟ್ಟಣದಲ್ಲಿ ಮಳೆ ಆಗಲಿಲ್ಲ. ಇದೀಗ ದೆಹಲಿಗೆ ಮಂತ್ರಿ ಆಗಿದ್ದಾರೆ. ಅಲ್ಲಿ ಮಳೆ ಆಗಿದೆಯಾ? ಕಳೆದ ಬಾರಿ ಶಾಸಕರು ಆಗಿದ್ದಾಗ ಚನ್ನಪಟ್ಟಣದಲ್ಲಿ ಮಳೆ ಆಗಿತ್ತಾ? ಪ್ರಕೃತಿ ಯಾರ ಅಧೀನದಲ್ಲೂ ಇಲ್ಲ. ನಾವು ಈ ಬಾರಿ ಆಷಾಡದಲ್ಲಿ ಬಾಗಿನ ಅರ್ಪಿಸಿದ್ದೇವೆ. ಇಪ್ಪತ್ತು ವರ್ಷದ ನಂತರ ಆಷಾಢದಲ್ಲಿ ಬಾಗಿನ ಅರ್ಪಿಸಲಾಗಿದೆ. ನಮ್ಮ ಅದೃಷ್ಟ ಸರಿ ಇದೆ ಎಂದು ತಮಟೆ ಸಾರುವುದಾ?" ಎಂದು ಟಾಂಗ್ ಕೊಟ್ಟರು.