ಮೈಸೂರು:ಎಚ್ ಡಿ ದೇವೇಗೌಡರ ಬಗ್ಗೆ ಯಾರೂ ಮಾತನಾಡಬಾರದು, ಅಂತಹ ನೈತಿಕತೆ ಯಾರಿಗೂ ಇಲ್ಲ, ಜೊತೆಗೆ ಮೈಸೂರಿನಲ್ಲಿ ಯದುವೀರ್ ಹಾಗೂ ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಿಸಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮನವಿ ಮಾಡಿದರು.
ಇಂದು ಮೈಸೂರಿನ ಕೆ ಆರ್ ನಗರದ ಎಚ್ ವಿಶ್ವನಾಥ್ ಅವರ ಮನೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ನಮ್ಮೂರಿಗೆ ಹಾಗೂ ನಮ್ಮ ಮನೆಗೆ ಬಂದಿರುವುದು ವಿಶೇಷ. ನನ್ನ ರಾಜಕೀಯ ಜೀವನದಲ್ಲಿ ಅಪರೂಪದ ಸಂದರ್ಭ ಎಂದು ತಿಳಿಸಿದರು.
ರಾಜಕಾರಣದಲ್ಲಿ ಟೀಕೆ, ಮಾತು, ಸಂಘರ್ಷ, ಸಹಜ. ಅದನ್ನ ಸರಿ ಮಾಡಿಕೊಂಡು ಹೋಗುವುದು ಅನಿವಾರ್ಯ. ಈ ನೆಲದಿಂದ ಗೆದ್ದು ಭಾರತದ ಪ್ರಧಾನಿ ಆಗುವುದು ಸುಲಭದ ಸಾಧನೆಯಲ್ಲ. ನನ್ನ ಕಷ್ಟದ ಸಂದರ್ಭದಲ್ಲೂ ನನ್ನ ಜೊತೆಗೆ ಇದ್ದವರು, ನಮ್ಮ ಭಿನ್ನಾಭಿಪ್ರಾಯ ಚಾಮುಂಡಿ ಬೆಟ್ಟದವರೆಗೂ ಹೋಗಿತ್ತು. ರಾಜಕೀಯ ಧ್ರುವೀಕರಣ ಸಂದರ್ಭದಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವುದೇ ಸವಾಲು. ಈಗ ಬಿಜೆಪಿ-ಜೆಡಿಎಸ್ ಒಂದಕ್ಕೊಂದು ಒಂದಾಗಿ ಮೋದಿ ಅವರನ್ನ ಪ್ರಧಾನಿ ಮಾಡಲು ಸಜ್ಜಾಗಿದೆ. ನಾನು ಜೆಡಿಎಸ್-ಬಿಜೆಪಿ ಹಾಗೂ ಕಾಂಗ್ರೆಸ್ ಗೆ ವಿಷಯಾಧಾರಿತ ಮೇಲೆ ಬೆಂಬಲ ನೀಡಿದ್ದೇನೆ. ಅದೆಲ್ಲವನ್ನೂ ಮರೆತು ಕುಮಾರಸ್ವಾಮಿ ಅವರು ನಮ್ಮ ಮನೆಗೆ ಬಂದಿರುವುದು ಸಂತೋಷ ಎಂದು ವಿಶ್ವನಾಥ್ ಹರ್ಷ ವ್ಯಕ್ತಪಡಿಸಿದರು.