ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪ (ETV Bharat) ಶಿವಮೊಗ್ಗ: ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗ ಮಾಡಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ ಎಂದು ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಶಿವಮೊಗ್ಗ ಪ್ರೆಸ್ಟ್ರಸ್ಟ್ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಅವರ ಆತ್ಮಹತ್ಯೆ ರಾಜ್ಯದ ಜನರ ಗಮನ ಸೆಳೆದಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಪ್ರಾಮಾಣಿಕ ಅಧಿಕಾರಿ ಬಹಿರಂಗ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ ಎಂದರು.
ಇಂದು ನಾನು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ನಂತರ ಅವರು ನನ್ನ ಜೊತೆ ಖಾಸಗಿಯಾಗಿ ಹೇಳಿದ ಮಾತು ಕೇಳಿ ಕರುಳು ಕಿವುಚಿ ಬರುತ್ತದೆ. ಚಂದ್ರಶೇಖರನ್ ಕವಿತಾ ಅವರ ಒಡವೆಯನ್ನ 20 ಲಕ್ಷ ರೂ.ಗೆ ಗಿರವಿ ಇಟ್ಟು ಸಾಲ ಮಾಡಿದ್ದಾರೆ. ಅಧಿಕಾರಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ, ಪ್ರಾಮಾಣಿಕ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದು. ಭ್ರಷ್ಟಾಚಾರ ನಡೆದ ಇಲಾಖೆಯ ಅಧಿಕಾರಿಗಳ ಹೆಸರು ಗೌಪ್ಯವಾಗಿಟ್ಟು ಕೊಳ್ಳಬೇಕು ಎಂದು ಸಚಿವರು ಹೇಳಬೇಕಿದೆ. ಅವರ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ನಾನು ವೈಯಕ್ತಿಕ 3 ಲಕ್ಷದ ಚೆಕ್ ನೀಡಿ ಬಂದಿದ್ದೇನೆ. ನೀತಿ ಸಂಹಿತೆ ಮುಗಿದ ಮೇಲೆ ಸರ್ಕಾರ ಕನಿಷ್ಟ 50 ಲಕ್ಷ ರೂ. ನೀಡಬೇಕು. ಇಲ್ಲವಾದಲ್ಲಿ ನಾವೇ ಶಿವಮೊಗ್ಗದ ಜನರ ಬಳಿ ಹಣ ಸಂಗ್ರಹಿಸಿ ನೀಡುತ್ತೇವೆ ಎಂದರು.
ಪರಮೇಶ್ವರ್ ಅವರು ನಿನ್ನೆ ನನ್ನ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಹಿಂದೆ ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಇಲ್ಲಿ ಸಚಿವರ ಮೌಖಿಕ ಆದೇಶದ ಮೇರೆಗೆ ಅಂತ ಬರೆದಿಟ್ಟಿದ್ದಾರೆ. ಹಾಗಾದರೆ, ಇಲಾಖೆಗೆ ಸಂಬಂಧಪಟ್ಟ ಸಚಿವರ ಹೆಸರು ಬಿಟ್ಟು ಪರಮೇಶ್ವರ್ ಹೆಸರು ಬರೆದಿಡಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಡಬ್ಬಲ್ ಸ್ಟ್ಯಾಂಡರ್ಡ್ : ನನ್ನ ವಿಚಾರದಲ್ಲಿ ಹಿಂದೆ ಸಿದ್ದರಾಮಯ್ಯ ದೊಡ್ಡ ಮೆರವಣಿಗೆ ನಡೆಸಿದರು. ಈಗ ಚಂದ್ರಶೇಖರನ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಡಬ್ಬಲ್ ಸ್ಟ್ಯಾಂಡರ್ಡ್ ಏಕೆ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಇದರಲ್ಲಿ ಬಿಜೆಪಿ ಬಗ್ಗೆ ನನಗೆ ಹೆಮ್ಮೆ ಇದೆ. ಕಾರಣ ನಾನು ರಾಜೀನಾಮೆ ನೀಡಿದಾಗ ಸ್ವೀಕರಿಸಿದರು ಎಂದರು.
ಎಷ್ಟೇ ಭ್ರಷ್ಟಾಚಾರ ನಡೆಸಲಿ, ಯಾರೇ ಆತ್ಮಹತ್ಯೆ ಮಾಡಿಕೊಂಡರೂ ನಾನು ಅವರ ಸುದ್ದಿಗೆ ಹೋಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದಂತೆ ಆಗಿದೆ. ಇದು ಒಳ್ಳೆಯ ಲಕ್ಷಣ ಅಲ್ಲ ಎಂದರು. ಎಸ್ಟಿ ಇಲಾಖೆಯಿಂದ 187 ಕೋಟಿ ರೂ. ಹಣದ ಭ್ರಷ್ಟಾಚಾರ ಆಗಿದೆ. ನಾಗೇಂದ್ರ ಅವರ ಹೆಸರು ನಾನು ಹೇಳಲ್ಲ, ಸಿಎಂ ಅವರ ರಾಜೀನಾಮೆ ಪಡೆಯಬೇಕು ಎಂದು ಹೇಳಿದರು.
ಲೂಟಿ ಹೊಡೆದ ಅನೇಕ ಅಧಿಕಾರಿಗಳು ಇದ್ದಾರೆ. ಆದರೆ ಚಂದ್ರಶೇಖರನ್ ಮನೆಯಲ್ಲಿ ಈಗ ಅರ್ಧ ಕೆ.ಜಿ ಅಕ್ಕಿ ಇಲ್ಲ. ಚುನಾವಣಾ ಫಲಿತಾಂಶ ಬಂದ ನಂತರ ಪರಿಹಾರವನ್ನು ಸರ್ಕಾರ ನೀಡಬೇಕು. ತನಿಖೆ ನಡೆಸಿ ನಿಮ್ಮ ಮಂತ್ರಿಯನ್ನು ರಕ್ಷಿಸುವ ಕೆಲಸ ಮಾಡಬಾರದು ಎಂದರು. ಒಂದೇ ಇಲಾಖೆಯಲ್ಲಿ ಮಾತ್ರ ಇಂತಹ ಹಣ ವರ್ಗಾವಣೆ ಆಗಿಲ್ಲ. ಅನೇಕ ಇಲಾಖೆಯಲ್ಲೂ ಸಹ ಇದೇ ರೀತಿ ಆಗಿರಬಹುದು. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.
ಮಾನವೀಯತೆ, ನೈತಿಕತೆಯ ಮೇಲೆ ಪರಿಹಾರ ನೀಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಸಿಗುತ್ತಿಲ್ಲ. ಇದಕ್ಕೆ ಚನ್ನಗಿರಿ ಪ್ರಕರಣವೇ ಸಾಕ್ಷಿ. ರಾಜ್ಯದಲ್ಲಿ ಜನಕ್ಕೆ ಅಲ್ಲ, ಪೊಲೀಸ್ ಠಾಣೆಗೆ ರಕ್ಷಣೆ ನೀಡಬೇಕಾದ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಠಾಣೆಯ ಸೋಮಶೇಖರ್ ಸುಮೋಟೊ ಕೇಸ್ ಹಾಕಿದ್ದರು. ಆದರೆ, ಇವರನ್ನು ಈಗ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ. ಇದರಿಂದ ರಸ್ತೆಯಲ್ಲೇ ನಮಾಜ್ ಮಾಡುವ ಕೆಲಸ ಎಲ್ಲಾ ಕಡೆ ಪ್ರಾರಂಭವಾಗುತ್ತಿದೆ. ಹಾಗಾದರೆ ಕರ್ನಾಟಕವನ್ನು ಮುಸ್ಲಿಂ ರಾಜ್ಯ ಎಂದು ಘೋಷಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ನಮಾಜ್ ಕುರಿತು ಬಿ ರಿಪೋರ್ಟ್ ಹಾಕಿದ್ದಾರೆ. ಇದರಿಂದ ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡಲು ಮುಂದೆ ಬರುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ಹೆಲ್ಪ್ಲೈನ್ನಂತೆ ಶಿವಮೊಗ್ಗದಲ್ಲೂ ತೆರೆಯಲಾಗುವುದು : ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿಯಲ್ಲಿ ಹೆಲ್ಪ್ಲೈನ್ ಮಾಡಿದ್ದಕ್ಕೆ ಧನ್ಯವಾದಗಳು. ನಾನು ಅವಶ್ಯಕತೆ ಇದ್ರೆ ಸಹಾಯ ಮಾಡುತ್ತೇನೆ ಎಂದರು. ಪ್ರಮೋದ್ ಮುತಾಲಿಕ್ ಜೊತೆ ಮಾತನಾಡಿ, ಶಿವಮೊಗ್ಗದಲ್ಲೂ ಸಹ ಒಂದು ಬ್ರಾಂಚ್ ತೆಗೆಯುತ್ತೇವೆ ಎಂದು ತಿಳಿಸಿದರು. ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಮಾತನಾಡುವುದಕ್ಕೆ ವಾಕರಿಕೆ ಬರುತ್ತದೆ. ಈಗ ತನಿಖೆ ಪ್ರಾರಂಭವಾಗಿದೆ. ಮುಂದೆ ನೋಡೋಣ. ನಾನು ಮುಸಲ್ಮಾನ್ ದ್ವೇಷಿ ಅಲ್ಲ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ವಿರುದ್ದ ಗರಂ :ಪೊಲೀಸ್ ಇಲಾಖೆಗೂ ಗಾಂಜಾ ಮಟ್ಕಾಗೂ ಎಲ್ಲಿ ತನಕ ಸಂಬಂಧ ಸರಿ ಇರುತ್ತದೆಯೋ ಅಲ್ಲಿಯವರೆಗೆ ಸಹ ಇದು ಮುಂದುವರೆಯುತ್ತದೆ. ಎಸ್ಪಿ ಇಂಥವರಿಂದ ಹಣ ಬರಲ್ಲ ಎಂದು ಹೇಳಲಿ ನೋಡೋಣ ಎಂದರು. ಮಟ್ಕಾ ಗಾಂಜಾ ದುಡ್ಡು ತಿಂದು ಇವರು ಬದುಕಬೇಕೇ?. ಈ ಹಣದಲ್ಲಿ ಇವರ ಮಕ್ಕಳಿಗೆ, ಹೆಂಡತಿಗೆ ಸೀರೆ ಉಡಿಸುತ್ತಾರೆಯೇ? ಎಂದು ಪ್ರಶ್ನಿಸಿದರು.
ಪೊಲೀಸ್ ಇಲಾಖೆಯು ಹಸು ಹಾಗೂ ಮಕ್ಕಳ ವಿಚಾರದಲ್ಲಿ ಸರಿಯಾದ ಕೆಲಸ ಮಾಡಲಿ. ಸರ್ಕಾರ ಬದುಕದೇ ಇರುವ ಕಾರಣ ಇದೆಲ್ಲ ನಡೆಯುತ್ತಿದೆ ಎಂದರು. ಪದವೀಧರ ಕ್ಷೇತ್ರದಲ್ಲಿ ರಘುಪತಿ ಭಟ್ಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಮೃತ ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, 3 ಲಕ್ಷ ರೂ. ಚೆಕ್ ನೀಡಿದರು.
ಇದನ್ನೂ ಓದಿ :ಅಧಿಕಾರಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ, ಸಚಿವ ನಾಗೇಂದ್ರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ - B Y VIJAYENDRA