ಕೆ.ಎಸ್.ಈಶ್ವರಪ್ಪ-ಬಿ.ವೈ. ರಾಘವೇಂದ್ರ ಶಿವಮೊಗ್ಗ:ಆರ್.ಎಸ್.ಎಸ್. ಯುಗಾದಿ ಉತ್ಸವದಲ್ಲಿ ಬಿಜೆಪಿ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ, ಬಿಜೆಪಿಯಿಂದ ಅಂತರಕಾಯ್ದುಕೊಂಡಿರುವ ಈಶ್ಬರಪ್ಪನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿದ್ದಾರೆ.
ಕೆ.ಎಸ್. ಈಶ್ವರಪ್ಪ ಇಂದು ಆರ್ಎಸ್ಎಸ್ನ ಯುಗಾದಿ ಉತ್ಸವದಲ್ಲಿ ಪಾಲ್ಗೊಂಡು ಬೇವು-ಬೆಲ್ಲ ಸ್ವೀಕರಿಸಿ, ತೆರಳಿದ್ದಾರೆ. ಇಲ್ಲಿ ಮತ್ತೊಂದು ವಿಷಯವೆಂದರೆ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕೂಡ ಇದೇ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆದರೆ, ಈಚೆ ಬದಿ ಈಶ್ವರಪ್ಪ ಕೂತಿದ್ದರೆ, ಆಚೆ ಬದಿಯಲ್ಲಿ ಬಿ.ವೈ. ರಾಘವೇಂದ್ರ ಕೂತಿದ್ದು ನಾನೊಂದು ತೀರ – ನೀನೊಂದು ತೀರ ಎಂಬುವಂತಾಗಿತ್ತು. ಇದು ಆರ್ಎಸ್ಎಸ್ನ ಪ್ರಮುಖರು ಸೇರಿದಂತೆ, ಎಲ್ಲ ಕಾರ್ಯಕರ್ತರಿಗೂ ಕಸಿವಿಸಿ ಉಂಟು ಮಾಡಿತು. ಆರ್.ಎಸ್.ಎಸ್. ಮುಖಂಡರು ಅದನ್ನು ಎಲ್ಲಿಯೂ ತೋರಿಸಿಕೊಳ್ಳದೇ ಉತ್ಸವ ಮುಗಿಸಿ ಹೊರಟರು.
ಈಶ್ವರಪ್ಪ ಆರ್ಎಸ್ಎಸ್ನ ಕಟ್ಟಾಳುವಾಗಿದ್ದರೂ ಕೂಡ, ಸಮವಸ್ತ್ರ, ಖಾಕಿ ಪ್ಯಾಂಟ್ ಧರಿಸದೇ ಕೇವಲ ಕಪ್ಪು ಟೋಪಿ ಧರಿಸಿ, ಬಿಳಿ ಜುಬ್ಬಾ ಪೈಜಾಮ್ನಲ್ಲಿ ಇಂದು ಆಗಮಿಸಿದ್ದು ವಿಶೇಷವಾಗಿತ್ತು. ಬಿ.ವೈ. ರಾಘವೇಂದ್ರ ಆರ್ಎಸ್ಎಸ್ನ ಸಮವಸ್ತ್ರದಲ್ಲಿಯೇ ಆಗಮಿಸಿದ್ದು, ಅಲ್ಲಿ ನೆರೆದಿದ್ದ ಆರ್ಎಸ್ಎಸ್ನ ಕಾರ್ಯಕರ್ತರು, ರಾಘವೇಂದ್ರ ಅವರ ಜೊತೆ ಸೆಲ್ಫಿ ಹಾಗೂ ಫೋಟೋಗೆ ಮುಗಿ ಬಿದ್ದಿದ್ದರು.
ಈ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಎಲ್ಲ ಹಿಂದೂಗಳು ಒಂದಾಗಬೇಕು ಎಂಬ ಸ್ಫೂರ್ತಿ ನೀಡುವ ಯುಗಾದಿ ಹಬ್ಬ ಇದಾಗಿದೆ. ಆರ್ಎಸ್ಎಸ್ನ ಯುಗಾದಿ ಉತ್ಸವ ಆಚರಣೆಯಲ್ಲಿ ನಾನು ಒಬ್ಬ ಸ್ವಯಂ ಸೇವಕನಾಗಿ ಸಂತೋಷದಿಂದ ಬಂದಿದ್ದೇನೆ ಎಂದು ಹೇಳಿದರು. ಇದೇ ವೇಳೆ, ಯುಗಾದಿ ಉತ್ಸವದಂದು ಒಟ್ಟಾಗುವ ಬಗ್ಗೆ ಪ್ರಶ್ನೆಗೆ ಉತ್ತರಿಸದೇ ಹೊರಟುಬಿಟ್ಟರು.
ನಂತರ ಮಾತನಾಡಿದ ಬಿ.ವೈರಾಘವೇಂದ್ರ, ಈ ಉತ್ಸವದಲ್ಲಿ ನಾನು ಒಬ್ಬ ಎಂಪಿಯಾಗಲಿ, ಪುರಸಭೆ ಸದಸ್ಯನಾಗಲಿ, ಬಿಜೆಪಿ ಅಭ್ಯರ್ಥಿಯಾಗಿ ಭಾಗಿಯಾಗಿಲ್ಲ. ಆರ್ಎಸ್ಎಸ್ನ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ವರ್ಷದಲ್ಲಿ ನಡೆಯುವ 6 ಉತ್ಸವಗಳಲ್ಲಿ ಯುಗಾದಿ ಉತ್ಸವವೂ ಕೂಡ ಒಂದಾಗಿದ್ದು, ಯುಗಾದಿ ಉತ್ಸವದ ಜೊತೆಗೆ ಆರ್ಎಸ್ಎಸ್ನ ಸಂಸ್ಥಾಪಕರಾದ ಹೆಡ್ಗೆವಾರ್ ಅವರ ಜನ್ಮ ದಿನವೂ ಕೂಡ ಇಂದಾಗಿದೆ. ಈ ಹಿನ್ನೆಲೆಯಲ್ಲಿಯೂ ಕೂಡ ಇಂದಿನ ಉತ್ಸವ ಮಹತ್ವದ್ದಾಗಿದೆ. ನಮ್ಮ ಹಿಂದೂಗಳ ಯುಗಾದಿ ಹಬ್ಬ ಹೊಸ ವರ್ಷ ಕೂಡ ಆಗಿದೆ. ನಾನಿಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಸಿಎಂ ಪ್ರಚಾರದ ವೇಳೆ ಭದ್ರತಾ ಲೋಪ ಪ್ರಕರಣ: ಗನ್ ಹೊಂದಿದ್ದ ವ್ಯಕ್ತಿ ಹೇಳಿದ್ದೇನು? - Security Lapse