ಮಂಡ್ಯ:ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಳೇ ಮೈಸೂರು ಭಾಗದ ಜನರ ಜೀವನಾಡಿ, ಕೆಆರ್ಎಸ್ ಜಲಾಶಯ ಭರ್ತಿಯಾಗಲು ಕೇವಲ ನಾಲ್ಕು ಅಡಿ ಮಾತ್ರ ಬಾಕಿ ಇದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲಾಯಶದಿಂದ ಕಾವೇರಿ ನದಿಗೆ ಹದಿನೈದು ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.
124.80 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಇದೀಗ 120 ಅಡಿಯ ಲೇವಲ್ಗೆ ನೀರಿನ ಪ್ರಮಾಣ ತಲುಪಿದೆ. ಜಲಾಶಯ ಭರ್ತಿಯಾಗಲು ಕೇವಲ ನಾಲ್ಕು ಅಡಿ ಮಾತ್ರ ಬಾಕಿ ಇದೆ. ಇನ್ನು ಜಲಾಶಯಕ್ಕೆ 51 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮತ್ತೊಂದು ಕಡೆ ಹಾರಂಗಿ ಹಾಗೂ ಹೇಮಾವತಿ ಜಲಾಶಯದಿಂದಲೂ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ವೇಳೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಹೀಗಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹತ್ತು ಕ್ರೆಸ್ಟ್ ಗೇಟ್ಗಳ ಮೂಲಕ 15 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಟ್ಟಿದ್ದಾರೆ. ಹೀಗಾಗಿ ಕಾವೇರಿಗೆ ಮತ್ತೆ ಜೀವಕಳೆ ಬಂದಿದೆ. ಇದು ಜಿಲ್ಲೆಯ ರೈತರ ಮಂದಹಾಸಕ್ಕೂ ಕೂಡ ಕಾರಣವಾಗಿದೆ.
ಅಂದಹಾಗೆ ಕಳೆದ ವರ್ಷ ಮಳೆಯಾಗದ ಹಿನ್ನೆಲೆಯಲ್ಲಿ ಕನ್ನಂಬಾಡಿ ಕಟ್ಟೆ ಭರ್ತಿಯಾಗಿರಲಿಲ್ಲ. ಕೆಲವೇ ದಿನಗಳ ಕೆಳಗೆ ಕೆಆರ್ಎಸ್ ಜಲಾಶಯ ಕೂಡ ಖಾಲಿ ಖಾಲಿಯಾಗಿತ್ತು. ಆದರೆ, ಇದೀಗ ನಿರಂತರ ಮಳೆಯಿಂದ ಭರ್ತಿ ಹಂತಕ್ಕೆ ಬಂದಿದೆ. ಇನ್ನು ಕಾವೇರಿ ನದಿಗೆ ನೀರು ಬಿಟ್ಟಿರುವುದರಿಂದ ನದಿಯಲ್ಲಿ ನೀರಿನ ಸೆಳೆತವಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಾತ್ಕಲಿಕವಾಗಿ ಬೋಟಿಂಗ್ ಸ್ಥಗಿತ ಮಾಡಿದ್ದಾರೆ.