ಶಿವಮೊಗ್ಗ:ಈಶ್ವರಪ್ಪನವರು ನಿಮ್ಮ ತಂದೆ ಯಡಿಯೂರಪ್ಪ ಅವರನ್ನು ಬಾಯಿಗೆ ಬಂದ ಹಾಗೆ ಬೈದಿದ್ದರೂ ಸುಮ್ಮನಿರುವಿರಿ. ನಿಮ್ಮ ತಂದೆ ಸಂಕಷ್ಟದಲ್ಲಿದ್ದಾಗ ಅವರ ಜೊತೆ ನಿಲ್ಲದ ಕುಲಘಾತಕ ಸಂಸ್ಕೃತಿ ನಿಮ್ಮದು, ಇಂಥ ನಿಮ್ಮ ಕುಲಘಾತಕ ಸಂಸ್ಕೃತಿಯನ್ನು ಸಮಾಜ ಒಪ್ಪುವುದಿಲ್ಲ. ಮೊದಲು ಸಂಸ್ಕೃತಿ ಬಿಟ್ಟಿರುವ ತಾವು, ನಂತರ ಮಧು ಬಂಗಾರಪ್ಪ ಅವರ ಸಂಸ್ಕೃತಿ ಬಗ್ಗೆ ಮಾತನಾಡಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು ಸಂಸದ ರಾಘವೇಂದ್ರಗೆ ತಿರುಗೇಟು ನೀಡಿದರು.
ಸಚಿವ ಮಧು ಬಂಗಾರಪ್ಪ ಅವರ ಶಿವಮೊಗ್ಗದ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಸದರು ಜಿಲ್ಲಾ ಸಚಿವರ ಸಂಸ್ಕೃತಿಯನ್ನು ಅಳೆದಿದ್ದಾರೆ. ಆ ರೀತಿ ಸಂಸ್ಕೃತಿಯನ್ನು ಅಳೆಯಲು ಹೋಗಬಾರದು. ನಿಮ್ಮ ತಂದೆಯವರಿಗೆ ಈಗ ನಿಮ್ಮದೇ ಪಕ್ಷದ ಈಗ ಬಂಡಾಯ ಎದ್ದಿರುವ ಈಶ್ವರಪ್ಪನವರು ನಿಮ್ಮ ತಂದೆ ಎದೆ ಬಗೆದರೆ ಒಂದು ಕಡೆ ಮಕ್ಕಳು ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಎಂದು ಹೇಳಿದರೂ, ನೀವು ಮಕ್ಕಳಾಗಿ ಖಂಡಿಸಲಿಲ್ಲ. ಒಂದು ಸಣ್ಣ ಬೆದರಿಕೆಯನ್ನು ಹಾಕಲಿಲ್ಲ. ನಿಮ್ಮ ತಂದೆಯವರನ್ನು ಬೈದಾಗ ಅದರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಂಡ್ರಲ್ಲ. ಅವರು ವಿಷಾದದಿಂದ ಅಧಿಕಾರ ತ್ಯಾಗ, ಇಡೀ ರಾಜ್ಯದ ಜನ ಕಣ್ಣೀರು ಹಾಕಿದಾಗ ನೀವು ನೋವು ಪಡೆಯಲಿಲ್ಲ. ನೀವು ಆಸ್ತಿ ಹಾಗೂ ಅಧಿಕಾರಕ್ಕೆ ಜೋತು ಬಿದ್ದ ಸಂಸ್ಕೃತಿ ನಿಮ್ಮದು ಎಂದು ಪ್ರಶ್ನಿಸಿದರು.
ಅಧಿಕಾರದ ಆಸೆಗಾಗಿ ಎಂಪಿ ಆದಾಗ ಅಧಿಕಾರ ಬಿಟ್ಟು ಕೊಡದೇ, ರಾಜಕೀಯ ಸಂಕಷ್ಟಕ್ಕೆ ಸಾಥ್ ನೀಡದ ನಿಮ್ಮದು ಯಾವ ಸಂಸ್ಕೃತಿ ? ಕೆಜೆಪಿ ಕಟ್ಟಿದಾಗ ನೀವು ಬಿಜೆಪಿ ಸಂಸದರಾಗಿ ಕೆಜೆಪಿಗೆ ಬೆಂಬಲ ನೀಡಿದ್ದು ಯಾವ ಸಂಸ್ಕೃತಿ? ಯಾರು ಮಾಡಿದ ತಪ್ಪಿಗೆ ನಿಮ್ಮ ತಂದೆ ಜೈಲಿಗೆ ಯಾಕೆ ಹೋದರು ಎಂಬುದನ್ನು ಹೇಳಬೇಕು. ಕಳೆದ 15 ವರ್ಷಗಳಿಂದ ದೆಹಲಿಗೆ ಹೋಗಿ ಹಿಂದಿ ಕಲಿಯಲಿಲ್ಲವೇ ನೀವು? ಎಂದು ಆರೋಪಿಸಿದರು.
ಬಹಳ ಸುಸಂಸ್ಕೃತರು ಎಂದು ಹೇಳುವ ನೀವು, ನಿಮ್ಮ ತಂದೆಗೆ ಎಷ್ಟು ಸಾಥ್ ನೀಡಿದ್ದೀರಿ? ನಿಮ್ಮ ತಂದೆ ಯಾಕೆ ಜೈಲಿಗೆ ಹೋಗಿದ್ರು. ಎರಡನೇ ಸಲ ಅಧಿಕಾರ ಕಳೆದು ಕೊಂಡಾಗ ನೀವು ಸಾಥ್ ನೀಡಲಿಲ್ಲ. ರಾಮನ ಹೆಸರು ಹೇಳುವ ನೀವು ತಂದೆಯ ತಕ್ಕ ಮಗನಾಗಲಿಲ್ಲ. ರಾಮ ತಂದೆಗಾಗಿ ಕಾಡಿಗೆ ಹೋದ, ಅಧಿಕಾರಕ್ಕಾಗಿ ತಂದೆಯನ್ನು ಮನೆಗೆ ಕಳುಹಿಸಿದ್ದೀರಿ ಎಂದು ದೂರಿದರು.