ಚಿತ್ರದುರ್ಗ: ನಗರದ ವಿ.ಸಿ.ಬಡಾವಣೆಯಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರ ವಿನಯ ನಿವಾಸವನ್ನು ಅವರ ಪುತ್ರ ಸರ್ಕಾರಕ್ಕೆ ಮಾರಾಟ ಮಾಡಲು ಹಿಂದೇಟು ಹಾಕಿದ್ದು, ಬದಲಿಗೆ ಕೆಪಿಸಿಸಿಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ನೇತೃತ್ವದ ನಿಯೋಗ ಸೆ.2 ರಂದು ನಿಜಲಿಂಗಪ್ಪನವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನಿಜಲಿಂಗಪ್ಪನವರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದರು.
ಎಸ್.ನಿಜಲಿಂಗಪ್ಪನವರ ನಿವಾಸ ಖರೀದಿಸಲು ಕೆಪಿಸಿಸಿ ನಿರ್ಧಾರ (ETV Bharat) ಈ ಕುರಿತು ಕಾಂಗ್ರೆಸ್ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ತಾಜ್ಪೀರ್ 'ಈಟಿವಿ ಭಾರತ' ಜೊತೆ ಮಾತನಾಡಿ, "ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಮನೆ ಖರೀದಿ ಮಾಡಲು ನಿರ್ಧರಿಸಲಾಗಿದೆ. ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಮನೆಯನ್ನು ಖರೀದಿ ಮಾಡಿ ಅಭಿವೃದ್ಧಿಪಡಿಸಿ ಪಕ್ಷದ ಕಚೇರಿ, ನಿಜಲಿಂಗಪ್ಪ ಭವನ, ಸ್ವಾತಂತ್ರ್ಯ ಹೋರಾಟಗಾರ ಭವನ ಇವುಗಳಲ್ಲಿ ಯಾವುದಾದರೂ ಒಂದನ್ನು ಮಾಡಬೇಕು ಎಂದು ಚರ್ಚೆ ನಡೆಯುತ್ತಿದೆ. ರಾಜ್ಯ ಮಟ್ಟದ ನಾಯಕರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದರು.
ನಿಜಲಿಂಗಪ್ಪನವರ ಪುತ್ರ ಕಿರಣ್ ಶಂಕರ್ ಪ್ರತಿಕ್ರಿಯಿಸಿ, "ಮನೆ ಖರೀದಿ ವಿಚಾರವಾಗಿ ಸಾಕಷ್ಟು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಆದರೆ ಸರ್ಕಾರ ಪ್ರತಿಕ್ರಿಯಿಸಿಲ್ಲ. ಮನೆ ಖರೀದಿ ಮಾಡುತ್ತೇವೆ ಎಂದು ನಮ್ಮ ಬಳಿ ಬಂದಿದ್ದು ಸರ್ಕಾರ. ಬಿ.ಎಸ್.ಯಡಿಯೂರಪ್ಪನವರು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಮನೆ ಖರೀದಿ ಮಾಡಬೇಕು ಎಂದು 12 ವರ್ಷಗಳ ಹಿಂದೆಯೇ ಹೇಳಿದ್ದರು. ಇಲ್ಲಿಯವರೆಗೆ ಯಾರು ಖರೀದಿಗೆ ಬರಲಿಲ್ಲ. ಸದ್ಯ ಕೆಪಿಸಿಸಿ ಖರೀದಿ ಮಾಡುವುದಾಗಿ ಹೇಳಿದೆ. ಅವರು ಖರೀದಿ ಮಾಡಿ ಪಕ್ಷದ ಕಚೇರಿ ಅಥವಾ ಬೇರೆ ಏನನ್ನಾದರೂ ಮಾಡಿಕೊಳ್ಳಲಿ. ಒಟ್ಟಿನಲ್ಲಿ ಮನೆ ಖರೀದಿ ಮಾಡಬೇಕು" ಎಂದು ಹೇಳಿದರು.
2022ರಲ್ಲಿ 5 ಕೋಟಿ ರೂ ಬಿಡುಗಡೆ:'ವಿನಯ' ನಿವಾಸ ಖರೀದಿಗೆ 2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಸರ್ಕಾರದ ವತಿಯಿಂದಲೇ ಮನೆ ಖರೀದಿಗೆ 4.24 ಕೋಟಿ ಹಾಗೂ ಸ್ಮಾರಕ ಅಭಿವೃದ್ಧಿಗೆ 76 ಲಕ್ಷ ಒಟ್ಟು 5 ಕೋಟಿ ರೂ ಹಣ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾಗಿತ್ತು. ಈ ಹಣ ಕಾರ್ಯನಿರ್ವಾಹಕ ಇಂಜಿನಿಯರ್ ಖಾತೆಯಲ್ಲಿದ್ದು, ಆಸ್ತಿ ನೋಂದಣಿಗೆ ನಿಜಲಿಂಗಪ್ಪ ಅವರ ಪುತ್ರರು, ಮೊಮ್ಮಕ್ಕಳ ಸಹಿ ಬೇಕು ಎಂದು ಅಂದಿನ ಜಿಲ್ಲಾ ಉಪ ನೋಂದಣಾಧಿಕಾರಿ ಕೋರಿದ್ದರು. ಅದರೇ ಕೆಲ ತಾಂತ್ರಿಕ ಕಾರಣಗಳಿಂದಾಗಿ ನೋಂದಣಿ ಪ್ರಕ್ರಿಯೆ ಕೈಬಿಡಲಾಗಿತ್ತು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ:ಕಿತ್ತೂರು ಕೋಟೆ, ಇತಿಹಾಸ ಉಳಿಸಲು ₹58 ಕೋಟಿ ಬಿಡುಗಡೆ: ಸಚಿವ ಕೃಷ್ಣಬೈರೇಗೌಡ