ಕರ್ನಾಟಕ

karnataka

ETV Bharat / state

ಯುವಕನ ರೀಲ್ಸ್‌ ಶೋಕಿಗೆ ನಕಲಿ ಗನ್ ಬಾಡಿಗೆ ನೀಡಿದ್ದ ಸಿನಿಮಾ ಟೆಕ್ನಿಷಿಯನ್​ಗೆ ನೋಟಿಸ್ - Fake Gun Supply - FAKE GUN SUPPLY

ಯುವಕನಿಗೆ ರೀಲ್ಸ್ ಮಾಡಲು ನಕಲಿ ಗನ್​ಗಳನ್ನು ಬಾಡಿಗೆಗೆ ನೀಡಿದ್ದ ಸ್ಯಾಂಡಲ್​ವುಡ್​ ಟೆಕ್ನಿಷಿಯನ್​​ಗೆ ಕೊತ್ತನೂರು ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.

Arun  katare
ಇತ್ತೀಚಿಗೆ ಪೊಲೀಸರು ಬಂಧಿಸಿದ ಅರುಣ್ ಕಠಾರೆ (ETV Bharat)

By ETV Bharat Karnataka Team

Published : Jul 4, 2024, 9:55 PM IST

ಬೆಂಗಳೂರು:ರೀಲ್ಸ್ ವ್ಯಾಮೋಹಕ್ಕೆ ದಾಸನಾಗಿ ಎಕೆ 47 ನಕಲಿ ಗನ್ ಖರೀದಿಸಿ ಸಾರ್ವಜನಿಕರಲ್ಲಿ ಭಯ ಮೂಡಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಕೊತ್ತನೂರು ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಸ್ಯಾಂಡಲ್‌ವುಡ್ ಟೆಕ್ನಿಷಿಯನ್ ಗನ್‌ಗಳನ್ನು ಬಾಡಿಗೆ ನೀಡಿರುವುದು ಬೆಳಕಿಗೆ ಬಂದಿತ್ತು. ಆರೋಪಿ ನೀಡಿದ ಹೇಳಿಕೆ ಆಧರಿಸಿ ಅಲೀಂ ಪಾಷಾ (ಸಾಹಿಲ್ ಗನ್ ಮಾಸ್ಟರ್) ಎಂಬಾತನಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಬಂಧಿತ ಅರುಣ್ ಕಠಾರೆ (26) ಜೂನ್ 9ರಂದು ನಕಲಿ ಗನ್‌ ಹಿಡಿದು ಬಾಡಿಗಾರ್ಡ್‌ಗಳೊಂದಿಗೆ ಕೊತ್ತನೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿಯ ಲೀಲಾ ಹೋಟೆಲ್​ ಬಳಿ ಬಂದಿದ್ದಾನೆ. ಆತನನ್ನು ಕಂಡು‌ ಆತಂಕಗೊಂಡ ಸಾರ್ವಜನಿಕರು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆರೋಪಿ ತನ್ನ ಇನ್​​ಸ್ಟ್ರಾಗ್ರಾಂ ಪೇಜ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದ. ಪೊಲೀಸರು ಆರೋಪಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಉಂಟುಮಾಡಿದ ಪ್ರಕರಣ ದಾಖಲಿಸಿ ಬಂಧಿಸಿದ್ದರು. ವಿಚಾರಣೆ ವೇಳೆ ರೀಲ್ಸ್ ಮಾಡಲು ಅಲೀಂ ಪಾಷಾ ಎಂಬಾತ ಎರಡು ಟಾಯ್ ಎಕೆ 47 ಗನ್​ಗಳನ್ನು ಬಾಡಿಗೆಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ಅಲೀಂ ಪಾಷಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೋಟಿಸ್​ನಲ್ಲೇನಿದೆ?:ಆರೋಪಿ ಅರುಣ್ ಕಠಾರೆಗೆ ಬಾಡಿಗೆ ನೀಡಲಾಗಿದ್ದ 2 ಎಕೆ 47 ಗನ್​ಗಳ ನೈಜತೆ ತಿಳಿಯುವುದಕ್ಕಾಗಿ ಗನ್​ಗಳನ್ನು ಹಾಜರುಪಡಿಸಬೇಕು. ನಕಲಿ ಗನ್​ಗಳನ್ನು ಸರಬರಾಜು ಮಾಡಲು ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದುಕೊಂಡಿರುವ ಅನುಮತಿ ಪತ್ರ, ಜಿಎಸ್​ಟಿ ಪಾವತಿ ಮಾಡಿದ್ದರೆ ಅದರ ಪ್ರಮಾಣಪತ್ರ ಒದಗಿಸಬೇಕು. ಗನ್​ಗಳನ್ನು ಸರಬರಾಜು ಮಾಡಿದ ರೀತಿ, ಬಾಡಿಗೆ ಹಣ ಪಾವತಿಸಿದ್ದರೆ ಸಂಬಂಧಿಸಿದ ಪೂರಕ ಸಾಕ್ಷ್ಯಾಧಾರ ನೀಡಬೇಕು. ಆರೋಪಿಗೆ ಸರಬರಾಜು ಮಾಡಿದ ಗನ್​ಗಳು ಅಸಲಿಯೇ ಅಥವಾ ನಕಲಿಯೇ ಎಂಬುದಕ್ಕೆ ನಿಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ವಿಚಾರಣೆಗೆ ಹಾಜರುಪಡಿಸಬೇಕು ಎಂದು ನೋಟಿಸ್​​ನಲ್ಲಿ ಪೊಲೀಸರು ತಿಳಿಸಿದ್ದಾರೆ.

ಯಾರು ಸಾಹಿಲ್:ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್, ಹೊಂಬಾಳೆ ಫಿಲ್ಸ್, ಗೀತಾ ಪಿಕ್ಚರ್ಸ್​ನಂತಹ ಬ್ಯಾನರ್​ಗಳ ಸಿನಿಮಾಗಳಿಗೆ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದಾರೆ. ಕಬ್ಜ, ಭೈರತಿ ರಣಗಲ್, ಮಫ್ತಿ ಸಿನಿಮಾಗಳಿಗೂ ಡಮ್ಮಿ ಗನ್ ಒದಗಿಸಿದ್ದರು.

ಇದನ್ನೂ ಓದಿ:ನಕಲಿ ಎಕೆ47, ಮೈತುಂಬಾ ಚಿನ್ನ, ಚೆಲುವೆಯರ ಜೊತೆ ಬಿಲ್ಡಪ್! ಭೀತಿ ಹುಟ್ಟಿಸಿದ 'ರೀಲ್ಸ್ ಸ್ಟಾರ್' ಅರೆಸ್ಟ್‌ - Reels Star Arrest

ABOUT THE AUTHOR

...view details