ಕೊಪ್ಪಳ: ಲೋಕಸಭೆ ಚುನಾವಣೆಯ ಫಲಿತಾಂಶ ಇನ್ನೆರಡೇ ದಿನದಲ್ಲಿ ಪ್ರಕಟವಾಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡಿರುವ ಕೊಪ್ಪಳ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಹ್ಯಾಟ್ರಿಕ್ ಗೆಲುವು ಕಂಡ ಕ್ಷೇತ್ರವನ್ನು ಹೊಸಮುಖ ಡಾ.ಬಸವರಾಜ ಶರಣಪ್ಪ ಕ್ಯಾವಟರ್ ಮೂಲಕ ಉಳಿಸಿಕೊಳ್ಳುವ ವಿಶ್ವಾಸ ಬಿಜೆಪಿಯದ್ದು. ಮತ್ತೊಂದೆಡೆ, ಕಾಂಗ್ರೆಸ್ನ ಒಂದು ಕಾಲದ ಭದ್ರಕೋಟೆಯಾಗಿದ್ದ ಕೊಪ್ಪಳವನ್ನು ಮರಳಿ ಪಡೆಯುವ ತವಕದಲ್ಲಿ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಇದ್ದಾರೆ.
ಕೊಪ್ಪಳ ಜಿಲ್ಲೆಯ ಐದು, ರಾಯಚೂರು ಜಿಲ್ಲೆಯ ಎರಡು ಮತ್ತು ಬಳ್ಳಾರಿ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರವನ್ನು ಕೊಪ್ಪಳ ಲೋಸಕಭೆ ಕ್ಷೇತ್ರ ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಇದುವರೆಗೆ 10 ಬಾರಿ ಕಾಂಗ್ರೆಸ್ ಗೆದ್ದ ದಾಖಲೆ ಹೊಂದಿದ್ದರೆ, ಕಳೆದ ಮೂರು ಅವಧಿಗಳಿಂದ ಬಿಜೆಪಿ ಹಿಡಿತ ಸಾಧಿಸಿಕೊಂಡು ಬಂದಿದೆ. 2009ರಲ್ಲಿ ಶಿವರಾಮಗೌಡ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಬಾರಿಗೆ ಖಾತೆ ತೆರೆದಿದ್ದರು. 2014ರ ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸಂಗಣ್ಣ ಕರಡಿ ಸತತ ಜಯ ದಾಖಲಿಸಿದ್ದರು.
2014ರ ಚುನಾವಣೆಯಲ್ಲಿ ಸಂಗಣ್ಣ ಕರಡಿ ವಿರುದ್ಧ ಕಾಂಗ್ರೆಸ್ನ ಮಾಜಿ ಶಾಸಕ ಬಸವರಾಜ ಹಿಟ್ನಾಳ ಸೋಲುಂಡಿದ್ದರು. ತಂದೆಯ ಸೋಲಿನ ಅನುಕಂಪದ ನಡುವೆಯೂ ರಾಜಶೇಖರ ಹಿಟ್ನಾಳ 2019ರಲ್ಲಿ ಮತ್ತದೇ ಸಂಗಣ್ಣ ಕರಡಿ ವಿರುದ್ಧ ಸುಮಾರು 38 ಸಾವಿರ ಮತಗಳಿಂದ ಪರಾಭವಗೊಂಡಿದ್ದರು. ಈ ಬಾರಿ ರಾಜಶೇಖರ ಹಿಟ್ನಾಳ ಮತ್ತೊಮ್ಮೆ ಕಣದಲ್ಲಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಕರಡಿ ಕುಟುಂಬದ ಹೊರತಾದ ಅಭ್ಯರ್ಥಿಯೊಂದಿಗೆ ಚುನಾವಣೆ ಎದುರಿಸಿದ್ದಾರೆ. ಆದ್ದರಿಂದ ಚುನಾವಣಾ ಫಲಿತಾಂಶ ಕುತೂಹಲ ಕೆರಳಿಸಿದೆ.
ಮೂರು ಚುನಾವಣೆಗಳ ಮತ ಪ್ರಮಾಣ: 2009ರ ಚುನಾವಣೆಯಲ್ಲಿ ಶೇ.55.40ರಷ್ಟು ಮತದಾನವಾಗಿತ್ತು. ಇದರಲ್ಲಿ ಬಿಜೆಪಿಯ ಶಿವರಾಮಗೌಡ ಶೇ.38.65ರಷ್ಟು ಮತ ಪಡೆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಸವರಾಜ ರಾಯರೆಡ್ಡಿ ಶೇ.27.81ರಷ್ಟು ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಶೇ.10.84ರಷ್ಟು ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ನಂತರದ ಎರಡು ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮತ ಪ್ರಮಾಣ ತುಂಬಾ ಕಡಿಮೆಯಾಗಿದೆ.
2014ರ ಚುನಾವಣೆಯಲ್ಲಿ ಶೇ.65.63ರಷ್ಟು ಮತದಾನವಾಗಿತ್ತು. ಆಗ ಬಿಜೆಪಿಯ ಸಂಗಣ್ಣ ಕರಡಿ ಶೇ.48.95ರಷ್ಟು ಮತ ಗಳಿಸಿದ್ದರು. ಕಾಂಗ್ರೆಸ್ನ ಬಸವರಾಜ್ ಹಿಟ್ನಾಳ ಶೇ.45.69ರಷ್ಟು ಮತ ಪಡೆದು, ಶೇ.3.26 ಮತಗಳ ಅಂತರದಿಂದ ಸೋತಿದ್ದರು. 2019ರ ಚುನಾವಣೆಯಲ್ಲಿ ಒಟ್ಟು ಮತದಾನ ಶೇ.68.54ರಷ್ಟಾಗಿತ್ತು. ಸಂಗಣ್ಣ ಕರಡಿ ಶೇ.49.75ರಷ್ಟು ಮತ ಪಡೆದಿದ್ದರು. ಕೆ.ರಾಜಶೇಖರ್ ಹಿಟ್ನಾಳ್ ಶೇ.46.79ರಷ್ಟು ಮತ ಗಳಿಸಿ, ಕೇವಲ ಶೇ.2.96ರಷ್ಟು ಮತಗಳಿಂದ ಪರಾಜಯ ಕಂಡಿದ್ದರು. ಈ ಬಾರಿ ದಾಖಲೆಯ ಶೇ.70ರಷ್ಟು ಮತದಾನವಾಗಿದೆ. ಒಟ್ಟಾರೆ 18.66 ಲಕ್ಷ ಮತದಾರರ ಪೈಕಿ 13.24 ಲಕ್ಷ ಜನ ಮತ ಚಲಾವಣೆ ಮಾಡಿದ್ದಾರೆ. ಹೀಗಾಗಿ ಇದು ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಬಿಜೆಪಿ ಅಭ್ಯರ್ಥಿಯ ಬಲವೇನು?: ಕೊಪ್ಪಳದಲ್ಲಿ ಬಿಜೆಪಿ ಹಾಲಿ ಸಂಸದರಾಗಿದ್ದ ಸಂಗಣ್ಣ ಕರಡಿ ಹ್ಯಾಟ್ರಿಕ್ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದರು. ಆದರೆ, ಅವರಿಗೆ ಬಿಜೆಪಿ ಮಣೆ ಹಾಕಿಲ್ಲ. ಡಾ.ಬಸವರಾಜ ಕ್ಯಾವಟರ್ ಅವರನ್ನು ಕಣಕ್ಕಿಳಿಸಿದೆ. ವಿಶೇಷ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಾದ ಇವರು ಕಿರಿಯ ವಯಸ್ಸಿನಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.