ಚಾಮರಾಜನಗರ:ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯ 4ನೇ ದಿನವಾದ ಭಾನುವಾರ ಪಂಕ್ತಿಸೇವೆ ನಿರ್ವಿಘ್ನದಿಂದ ನಡೆಯಿತು. ದೇಗುಲ ಆವರಣ ಬಿಟ್ಟು ಖಾಸಗಿ ಜಮೀನುಗಳಲ್ಲಿ ಬಿಡಾರ ಹೂಡಿದ್ದ ಭಕ್ತರು, ಮಾಂಸದ ಅಡುಗೆ ಮಾಡಿ ಪಂಕ್ತಿಸೇವೆ ನಡೆಸಿದರು.
ಚಿಕ್ಕಲ್ಲೂರು ಕ್ಷೇತ್ರದಲ್ಲಿ 5 ಹಗಲು, 5 ರಾತ್ರಿ ಜಾತ್ರೆ ನಡೆಯಲಿದ್ದು, 4ನೇ ದಿನದಂದು ಪಂಕ್ತಿಸೇವೆ ನಡೆಸಲಾಗುತ್ತದೆ. ಅದರಂತೆ, ಲಕ್ಷಾಂತರ ಮಂದಿ ಭಕ್ತರು ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ ಸಹಪಂಕ್ತಿ ಭೋಜನ ಸವಿದಿದ್ದಾರೆ. ಐತಿಹಾಸಿಕ, ಭಕ್ತಿ ಪರಾಕಾಷ್ಠೆಯ ಜಾತ್ರೆ ಎಂದೇ ಜನಜನಿತವಾಗಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಪಂಕ್ತಿಸೇವೆ ಸಲ್ಲಿಸಿ ತಮ್ಮ ನಂಬಿಕೆ, ಭಕ್ತಿ ಅಚಲ ಎಂದು ಸಾರಿದರು.
ಮಾಂಸದ ಭಕ್ಷ್ಯ ತಯಾರಿಸಿ ದೇವರಿಗೆ ಎಡೆ ಇಟ್ಟು ಬಳಿಕ ಸಹಪಂಕ್ತಿ ಭೋಜನ ಮಾಡುವ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿ ಹದ್ದಿನ ಕಣ್ಣಿಟ್ಟಿತ್ತು. ಆಚರಣೆಯನ್ನು ಬಿಡಲೊಪ್ಪದ ಜನರು ದೇವಾಲಯ ಆವರಣದಿಂದ ದೂರದ ಪ್ರದೇಶದಲ್ಲಿ ಮಾಂಸದ ಅಡುಗೆ ತಯಾರಿಸಿ ಶ್ರದ್ಧೆ-ಭಕ್ತಿಯಿಂದ ಎಡೆ ಅರ್ಪಿಸಿದ್ದಾರೆ. ಜಿಲ್ಲೆ ಹೊರ ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ಮಾಂಸದೂಟ ತಯಾರಿಸಿ ನೀಲಗಾರರ ಸಂಪ್ರದಾಯಕ್ಕೆ ಅನುಗುಣವಾಗಿ ಎಡೆ ಅರ್ಪಿಸಿ ರಾಚಪ್ಪಾಜಿ, ಸಿದ್ದಾಪ್ಪಾಜಿ ದೇವರಿಗೆ ಮದ್ಯ- ಮಾಂಸ ಅರ್ಪಿಸಿ ಭಕ್ತಿ ಮೆರೆದರು.